>> Tuesday, April 20, 2010

ಅವ್ವ
ಹಾಲು ಗಲ್ಲದ ಮಗಳು
ಪ್ರೀತಿಯಿಂದ ಬಾಚಿ ಅಪ್ಪಿಕೊಂಡಾಗಲೆಲ್ಲ
ನೆನಪಾಗಿ ನಲಿಯುತ್ತಾಳೆ ಅವ್ವ.
ಅಂಬೆಗಾಲಿಡುವ ಮಗಳು
ಅಚಾನಾಕಾಗಿ ಕಸದಲಿ ಕೈ
ಇಟ್ಟಾಗ ಮಿಡಿಯುವ ಮನದಲಿ
ಅವ್ವ ಇಣುಕಿ ನೊಡುತ್ತಾಳೆ.
ಮರೆಯಲಾಗದ ಬಾಲ್ಯ
ಮಸುಕಾದ ಮುಗ್ಧತೆ
ತಿರುಗಲೊಲ್ಲದು.
ತಿರು ತಿರುಗಿ ಒಗೆದ ಇತಿಹಾಸ
ಜೊತೆಯಲಿ ಕುಣಿಯುವ ವರ್ತಮಾನ
ಭೂತವಾಗಿ ಕಾಡುವ ಭವಿಷ್ಯ-
ಗಳಲಿ ಅವ್ವ ಅಲುಗಾಡದೆ
ಬೇರೂರಿದ್ದಾಳೆ.
ಬೇಡವೆಂದದ್ದನ್ನು ಮಾಡಿಯೇ ತೀರುತ್ತೇನೆಂದು
ಮಗಳ ಹಿಡಿದ ಹಟ ನಿಲ್ಲದಾದಾಗ ಅವ್ವ
ಒಳಗೊಳಗೆ ರಮಿಸುತ್ತಾಳೆ, ಕಿವಿ ಹಿಂಡಿ ಬುದ್ಧಿ ಹೇಳುತ್ತಾಳೆ
ಹಟ ಯಾರು ಸೊತ್ತು ಅಲ್ಲ ಅಂದು.
ಸಿಟ್ಟು, ದುಃಖ, ಸಂಭ್ರಮ , ಕೆಣಕುವ
ಮೈಸಿರಿ, ನಿಲ್ಲದೇ ನೆಲೆ ಇಲ್ಲದೇ ಓಡಾಡುವ
ಮತಿಯನು ಹಿಡಿದಿಡುವಾಗ, ಅವ್ವಾ !
ಎಂದು ನಿಟ್ಟಿಸಿರು ಬಿಡುವಾಗ
ನರನಾಡಿಗಳಲಿ ತುಂಬುವ ಜೀವ ಚೈತನ್ಯ.
ಒಮ್ಮೆ ದೇವತೆಯಂತೆ
ಮಗದೊಮ್ಮೆ ಮುಂಗೋಪಿಯಂತೆ,
ಜೋರಾಗಿ ತಟ್ಟುವ ರೊಟ್ಟಿಯ ಹಿಟ್ಟಲಿ ಅರಳುವ ಸದ್ದಿನಲಿ.
ಕಾದ ಹಂಚಲಿ ನೀರ ಸವರಿದಾಗ ಉಬ್ಬಿ ನಿಲ್ಲುವ
ಬಿಸಿ ರೊಟ್ಟಿಯಂತೆ ಅವ್ವ ನಿರಂತರ ರುಚಿಕರ.
ಅವ್ವ ಭವಿಷ್ಯ
ನಾನು ಇತಿಹಾಸ
ಮಗಳು ವರ್ತಮಾನ.
ಕಾಲನ ಕೂಟದಲಿ ಆಡುವ ಆಟದಲಿ
ಆಟಗಾರರೆಲ್ಲ ಸೋತು ಮೈದಾನದಲಿ
ಪೆಚ್ಚಾದಾಗ ಅವ್ವ ನನ್ನನು ಮತ್ತೆ ಮತ್ತೆ ಆಟಕ್ಕೆ
ದೂಡುತ್ತಾಳೆ. ಗೆಲುವ ಸಂಭ್ರಮಕೆ ನಿತ್ಯ
ಹರಸುತ್ತಾಳೆ.
Posted by siddu yapalaparavi at 9:20 AM 0 comments
Labels:

0 comments: