- ಲೈಂಗಿಕ ಜಗತ್ತಿನ ಎದೆಗಾರಿಕೆಯ ಗತ್ತು

>> Saturday, April 17, 2010



ಅನ್‌ರೆಸ್ಟ ಮನೋಸ್ಥೊತಿಯ ಯುವಕರ ಚಟುವಟಿಕೆಗಳ ವಿವರಣೆಯೊಂದಿಗೆ, ಅವರ ಇತರ ಕ್ರೇಜ್ ಬಹುಚರ್ಚಿತ ಸಂಗತಿಗಳು ಗಮನ ಸೆಳೆದವು. ಮನುಷ್ಯನ ಮೂಲಭೂತ ಅಗತ್ಯಗಳಾದ ಹಸಿವು, ದಾಹ, ನಿದ್ರೆಯನ್ನು ಪೂರೈಸಲು ಹೆಣಗುವ ವಾತಾವರಣ ಬಡದೇಶಗಳಲ್ಲಿದೆ. ಊಟ, ನೀರು, ದೈಹಿಕ ಸುಖಕ್ಕಾಗಿ ಕಾಮವನ್ನು ಸಮಾಜ ನಿರ್ಮಿತ ಬಂಧನದಲ್ಲಿ ಅನುಭವಿಸುವ ಅಗತ್ಯ. ಒಮ್ಮೊಮ್ಮೆ ತುತ್ತು ಕೂಳಿಗೂ ಪರದಾಟ. ನೀರು, ಅನ್ನ ಸಾಕಾಗುವಷ್ಟು ಪಡೆದ ಮೇಲೆ ಕಾಮ ತೃಷೆಗೆ ಮದುವೆಯೆಂಬ ಸಂಕೋಲೆ. ಭಾರತದಲ್ಲಿ ಮದುವೆ ಇನ್ನೂ ಅರ್ಥಪೂರ್ಣ ಸಂಪ್ರದಾಯ. ಪ್ರತಿಶತ ೯೫ರಷ್ಟು ಜನರಲ್ಲಿ ಮದುವೆ ಬಂಧನದಲ್ಲಿ ವಿಶ್ವಾಸವಿದೆ. ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯೊಂದರ ಜಾಡು ಹಿಡಿದು ಇಂಗ್ಲೆಂಡಿನ ಯುವಕರ ಮನೋಸ್ಥಿತಿಯನ್ನು ಅರಿಯಲೆತ್ನಿಸಿದಾಗ ಅಚ್ಚರಿಯೆನಿಸುವ ವಿಷಯಗಳು ಗೋಚರ.
ಕಾಮ ಇಂದು ಐರೋಪ್ಯ ದೇಶಗಳಲ್ಲಿ ಪ್ರಮುಖ ಸಂಗತಿಯಾಗಿ ಉಳಿದಿಲ್ಲ. ಡೇಟಿಂಗ್ ಸಂಪ್ರದಾಯ ಪ್ರಾರಂಭವಾಗಿ ಅದನ್ನು ಬೆರಗಿನಿಂದ ಚರ್ಚಿಸುವ ಸಂಭ್ರಮದಲ್ಲಿ ನಾವಿದ್ದಾಗ ಐರೋಪ್ಯರು ಇನ್ನೊಂದಿಷ್ಟು ದಾಪುಗಾಲಿಟ್ಟಿದ್ದಾರೆ. ಕಾನೂನು ಹಾಗೂ ಸಮಾಜದ ನಿರ್ಣಯದಂತೆ ಮಕ್ಕಳು ೧೬-೧೮ರ ಪ್ರಾಯದವರೆಗೆ ಪಾಲಕರೊಂದಿಗೆ ವಾಸಿಸಬಹುದು.
ಮದುವೆಯೆಂಬ ವ್ಯವಸ್ಥೆ ಶಿಥಿಲಗೊಂಡ ಮೇಲೆ ಪಾಲಕರು ದಿಕ್ಕಾಪಾಲಾಗಿದ್ದಾರೆ. ಪಾಲಕರು ಕೇವಲ ಪಾಲಕ ಆದಾಗ ಮಕ್ಕಳಿಗೆ ಕಿರಿಕಿರಿಯಾಗುತ್ತದೆ. ಅಪ್ಪ ಇದ್ದರೆ ತಾಯಿ ಇಲ್ಲ, ತಾಯಿ ಇದ್ದರೆ ಅಪ್ಪ ಇಲ್ಲ.ಈ ವಿಚಿತ್ರ ಗೊಂದಲದಲ್ಲಿ ಯುವಕರಿಗೆ ಪಾಲಕರೊಂದಿಗೆ ವಾಸಿಸುವುದೆಂದರೆ ಅಷ್ಟಕ್ಕಷ್ಟೆ.
ಇಂಗ್ಲೆಂಡಿನ ಸರ್ಕಾರಕ್ಕೆ ಸ್ವಯಂ ಸೇವಾ ಸಂಸ್ಥೆಗಳಿಗೆ ಮಕ್ಕಳೆಂದರೆ ಪಂಚಪ್ರಾಣ. ಮಕ್ಕಳೇ ದೇಶದ ಸಂಪತ್ತು. ಅಲ್ಲಿನ ಹವಾಮಾನ, ಸಾಮಾಜಿಕ ಹಾಗೂ ಕೌಟುಂಬಿಕ ವ್ಯವಸ್ಥೆಯಿಂದಾಗಿ ಹುಡುಗಿಯರು ಮಕ್ಕಳನ್ನು ಪಡೆಯಲು ಬಯಸುವುದಿಲ್ಲ. ತಾಯ್ತನದ ಕನಸುಗಳಿಗೆ ಬಣ್ಣ ತುಂಬುವ ಗೊಡವೆಗೆ ಹೋಗುವುದಿಲ್ಲ. ಹೈಸ್ಕೂಲ್ ಹಾಗೂ ಕಾಲೇಜು ಮಟ್ಟದಲ್ಲಿರುವಾಗಲೇ ಲೈಂಗಿಕ ಪಾಠ ಶುರು, ವಿಚಿತ್ರವೆಂದರೆ ಸೆಕ್ಸನ್ನು ಅನುಭವಿಸಲು ತಕರಾರಿಲ್ಲ ಆದರೆ ಪಾಲಿಸಬೇಕಾದ ನಿಯಮಗಳದೇ ಪಾಠ! ಸಂಕೋಚ, ಅಸಹ್ಯ ಯಾವುದೂ ಇಲ್ಲ. ಕಾಂಡೋಮ್ ಬಳಕೆ, ಸೇಫ್ ಸೆಕ್ಸ್ ಕುರಿತು ತರಬೇತಿ. ನಮಗೆ ಅದನ್ನು ಮಾತನಾಡಲು ಎಲ್ಲಿಲ್ಲದ ಸಂಕೋಚ. ಪ್ರಾಥಮಿಕ ಹಾಗೂ ಹೈಸ್ಕೂಲ್‌ಗಳಿಗೆ ಸಾರ್ವಜನಿಕರಿಗೆ ಪ್ರವೇಶವಿಲ್ಲ ಮಕ್ಕಳ ಪಾಲಿನ ಸಂದನವನದಂತಿರುವ ಶಾಲೆಗಳು ಪ್ರವಾಸಿಗರಿಗೆ ಜೈಲುಗಳು. ಕೇವಲ ಒಂದೆರಡು ಶಾಲೆಗಳಲ್ಲಿ ಮಾತ್ರ ಪ್ರವೇಶ ಲಭ್ಯವಾಯಿತು. ಆದರೆ ಯಾವುದೇ ಖಾಸಗಿ ಸಂಗತಿಗಳನ್ನು ಮಕ್ಕಳೊಂದಿಗೆ ಚರ್ಚಿಸುವಂತಿಲ್ಲ. ಪ್ರಾಥಮಿಕ ಹಂತದ ವಿದ್ಯಾರ್ಥಿಗಳನ್ನು ಕಂಡರೆ ಶಿಕ್ಷಕರೇ ಹೆದರುತ್ತಾರೆ. ಇದೇ ಕಾರಣಕ್ಕೆ ಶಾಲಾಶಿಕ್ಷಕರಿಗೆ ಅತೀ ಹೆಚ್ಚು ವೇತನ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಬೈಯುವಂತಿಲ್ಲ, ದಂಡಿಸುವಂತಿಲ್ಲ. ಏರುದನಿಯಲ್ಲಿ ಮಾತನಾಡುವಂತಿಲ್ಲ. ವಿದ್ಯಾರ್ಥಿಗೆ ವರ್ಗ ಕೋಣೆ ಬೇಸರವೆನಿಸಿದರೆ ತನ್ನ ಪಾಡಿಗೆ ತಾನಿರುವ ಸ್ವಾತಂತ್ರ್ಯ. ಅವನ ನೋವುನಿವಾರಣೆಗಾಗಿ ಕೌನ್ಸಿಲ್ ಕೇಂದ್ರಗಳು ಶಾಲೆಯಲ್ಲಿನ ಕೌನ್ಸಿಲರ್ ಪ್ರತಿಯೊಬ್ಬ ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಿ ಅವರ ಬೇಕು ಬೇಡಗಳನ್ನು ಪೂರೈಸಬೇಕು. ಒಮ್ಮೊಮ್ಮೆ ವಿದ್ಯಾರ್ಥಿ ಅಬ್‌ನಾರ್ಮಲ್ ಆದದ್ದನ್ನು ಬಯಸಿದರೆ ಸಿರಾಕರಿಸುವಂತಿಲ್ಲ. ಇಂತಹ ಹತ್ತು ಹಲವು ಸಂಗತಿಗಳನ್ನು ನಾವು ಬಾಯಿ ತೆರೆದುಕೊಂಡು ಕೇಳುವ ಅನಿವಾರ್ಯತೆ.
ನಮಗೆ ಕಷ್ಟ ಎನಿಸಿದರೆ ಅವರೇನು ಮಾಡಬೇಕು? ಕೇಳುವ ಕರ್ಮ ನಮ್ಮದು. ವಿದ್ಯಾರ್ಥಿಯ ಬುದ್ಧಿಮತ್ತೆ ಹೇಗೆ? ಅವನ ಗ್ರಹಿಕೆ ಯಾವ ಮಟ್ಟದ್ದು ಎಂಬ ಸಂಗತಿಗಳಿಗಿಂತಲೂ ಅವನ ವೈಯಕ್ತಿಕ ಯೋಗ ಕ್ಷೇಮದ ಜವಾಬ್ದಾರಿಯೂ ಶಿಕ್ಷಕರ ಹೆಗಲಿಗೆ.
ವಿದ್ಯಾರ್ಥಿಗಳ, ಯುವಕರ ಅಭಿರುಚಿಯನ್ನು(?) ಕೇಳಿದಾಗ ಅಚ್ಚರಿಯಾಯಿತು. ಇಂಗ್ಲೆಂಡ್‌ನ ಯುವಕರಿಗೆ ಎಷ್ಟು ಸಾಧ್ಯವೋ ಅಷ್ಟು ಬೇಗ ಸೆಕ್ಸ್ ಅನುಭವಿಸುವ ಆತುರ. ವರ್ಜಿನ್ ಅನ್ನುವ ಇಂಗ್ಲಿಷ್ ಪದ ಅರ್ಥ ಕಳೆದುಕೊಂಡಿದೆ.ಶೀಲ- ಚಾರಿತ್ರ್ಯ ವ್ಯಕ್ತಿಯ ನೈತಿಕತೆ ಕುರಿತು ಗಂಟೆಗಟ್ಟಲೆ ಚಿಂತಿಸುವ ಅಲ್ಲಲ್ಲ ಚಿಂತೆ ಮಾಡುವ ನಮ್ಮ ಮನಸಿನ ಹಾದರವನ್ನು ಬದಿಗಿರಿಸಿ ಇಂತಹ ಸಂಗತಿಗಳನ್ನು ಕುತೂಹಲದಿಂದ ಆಲಿಸಿದೆ. ಹಾದಿ ತಪ್ಪುವ, ಡೇಟಿಂಗ್‌ಗೆ ಹಾತೊರೆಯುವ ಮಕ್ಕಳನ್ನು ಪಾಲಕರು ನಿರ್ಬಂಧಿಸುವ ಹಾಗಿಲ್ಲ. ಕೇವಲ ಎಜ್ಯುಕೇಟ್ ಮಾಡಬೇಕು. ಒಂದು ವೇಳೆ ತುಂಬಾ ಒತ್ತಾಯ ಹೇರಿದರೆ ಎನ್.ಜಿ.ಒ. ಗಳ ಮೊರೆ ಹೋಗುತ್ತಾರೆ. ಎನ್.ಜಿ.ಒ. ಕಾರ್ಯಕರ್ತರು ಮನೆ ಮನೆಗೆ ತೆರಳಿ ಯುವಕರ ಯೋಗ ಕ್ಷೇಮ ವಿಚಾರಿಸುವ ಸೇವೆ. ಒಂದು ವೇಳೆ ಯುವಕರು ಪಾಲಕರೊಂದಿಗೆ ಇರಲು ನಿರಾಕರಿಸಿ, ದೂರು ದಾಖಲಿಸಿದರೆ ಮನೆಯಿಂದ ಬೇರ್ಪಡಿಸುವ ತರಾತುರಿ. ಇದಕ್ಕೆ ಪಾಲಕರ ಅನುಮತಿ ಬೇಕಿಲ್ಲ.
ಈಗ ನನ್ನ ಅರ್ಧ ಆಯುಷ್ಯ ಮುಗಿದಿದೆ. ಊರಿಂದ ವಾಪಾಸಾಗುವಾಗ ಅಪ್ಪ ಬಸ್ ಚಾರ್ಜಿಗೆ ಹಣ ಇದೆಯೋ ಇಲ್ಲವೋ ಕೇಳುತ್ತಾರೆ. ಮಕ್ಕಳ ಹಾಗೆ ವಿಚಾರಿಸುತ್ತಾರೆ. ಬರುವಾಗ ಅವರಿಗೆ ನಮಸ್ಕರಿಸಿ, ಹೇಳಿ ಬರದಿದ್ದರೆ ನಮಗೆ ಹಳವಂಡ ಕಿರಿಕಿರಿ.
ಪಾಲಕರೊಂದಿಗೆ ಜಗಳ ಪ್ರೀತಿ ನಿರಂತರವಾಗಿರುತ್ತದೆ. ಆದರೆ ಅವರಿಂದ ಬೇರ್ಪಡುವ ಕನಸು ಕಾಣುವುದಿಲ್ಲ.
ಇಂಗ್ಲೆಂಡಿನ ಶಾಲೆಯಲ್ಲಿ ವಿದ್ಯಾರ್ಥಿಗಳು ಪಾಲಕರೊಂದಿಗೆ ವಾಸಿಸುವ ಮಕ್ಕಳನ್ನು ಟೀಕಿಸುತ್ತಾರೆ. ಅಮ್ಮನ ಸೆರಗಿನನಾಸರೆಯಲ್ಲಿ ಬೆಳೆಯುವವರನ್ನು ಕಂಡರೆ ಅಪಹಾಸ್ಯ. ಮನೆ ಬೇಡವೆನ್ನುವಂತೆ ಪ್ರೇರೆಪಿಸುತ್ತಾರೆ. ಗೆಳೆಯ-ಗೆಳತಿಯರ ಟೀಕೆಗೆ ಬೇಸತ್ತ ಯುವಕರು ಪಾಲಕರಿಂದ ಬೇರ್ಪಡುವ ತರಾತುರಿ.
ಐಷಾರಾಮಿ ಹಾಸ್ಟೆಲ್‌ನಲ್ಲಿ ಸರಕಾರ ನೀಡುವ ಸ್ಟೈಫಂಡ್, ಪುಕ್ಕಟೆ ಶಿಕ್ಷಣ ಪಡೆದು ನೆಮ್ಮದಿಯಿಂದ ಇದ್ದರೆ ಸಾಕಪ್ಪ ಎಂಬುದೇ ಸರಕಾರದ ಇಚ್ಚೆ. ಎಲ್ಲ ಪುಕ್ಕಟೆ ಸಿಕ್ಕರೂ ಸಮಸ್ಯೆ ತಂದೊಡ್ಡುವ ಯುವಕರನ್ನು ರಕ್ಷಿಸುವದೊಂದು ತಲೆಬೇನೆ.
ನಮ್ಮ ದೇಶದಲ್ಲಿ ಸರಕಾರಿ ಹಾಸ್ಟೆಲ್‌ಗಳಲ್ಲಿರುವ ಮಕ್ಕಳು ಸಿಕ್ಕಿದ್ದೇ ಅಮೃತವೆಂಬಂತೆ ಸ್ವೀಕರಿಸಿ, ನರಕಸದೃಶ ವಾತಾವರಣವಿದ್ದರೂ ವ್ಯವಸ್ಥೆಗೆ ಹೊಂದಿಕೊಂಡು ಎಲ್ಲವನ್ನು ಸಹಿಸಿಕೊಳ್ಳುತ್ತಾರೆ. ಆದರೆ ಇಂಗ್ಲೆಂಡಿನ ಯುವಕರ ಚಿಂತನೆಯೇ ಬೇರೆ.
ಕಿರಿಯ ಪ್ರಾಯದಲ್ಲಿನ ಸಿಗರೇಟ್ ಸೇವನೆ, ಮದ್ಯಪಾನ, ಲೈಂಗಿಕ ಆತುರತೆ, ಯುವಕರನ್ನು ಅರೆಪ್ರಜ್ಞಾವಸ್ಥೆಗೆ ತಳ್ಳಿವೆ.ಈಗ ಹುಡುಗಿಯರ ಇನ್ನೊಂದು ಹೊಸ ಕ್ರೇಜ್ ಏನೆಂಬುದು ಅಷ್ಟೇ ಕುತೂಹಲಮಯ. ಎಷ್ಟು ಸಾಧ್ಯವೋ ಅಷ್ಟು ಬೇಗ ಹುಡುಗಿಯರು ತಮ್ಮ ವರ್ಜಿನ್‌ನ್ನು ಕಳೆದುಕೊಳ್ಳಬೇಕೆಂಬ ಆತುರ. ಸಮಾನ ವಯಸ್ಸಿನ ಹುಡುಗಿಯರೆಲ್ಲ ಸೇರಿಕೊಂಡು ಇದೊಂದು ದೇಶದ ಬಹು ದೊಡ್ಡ ಜ್ವಲಂತ ಸಮಸ್ಯೆ ಎಂಬಂತೆ ಚರ್ಚಿಸುತ್ತಾರೆ. ಪರಸ್ಪರರ ಚರ್ಚೆಯಲ್ಲಿ ಸಲಹೆಗಳನ್ನು ರವಾನಿಸುತ್ತಾರೆ. ಕನ್ಯತ್ವ ಕಳೆದುಕೊಳ್ಳದ ಹುಡುಗಿಯರನ್ನು ಹಂಗಿಸಿ ಚುಡಾಯಿಸುವದರಿಂದ ಬೇಗ ಬೇಗ ದೊಡ್ಡವರಂತೆ ಕಾಣಲು ಬಯಸುತ್ತಾರೆ. ದೇಹಸಿರಿ ಬೆಳಸಿಕೊಳ್ಳಲು ಹೆಣಗಿ, ಬಗೆಬಗೆಯ ಆಕರ್ಶಣೀಯ ಕಾಸ್ಮೆಟಿಕ್‌ನಂತೆ ಹಾರ್ಮೊನ್ ಇಂಜಕ್ಷನ್, ಮಾತ್ರೆಗಳನ್ನು ತೆಗೆದುಕೊಳ್ಳುವ ಧಾವಂತ. ಶೀಲ ಕಳೆದುಕೊಂಡು, ಆದ ಅನುಭವಗಳನ್ನು ಸಂಗಾತಿಗಳೊಂದಿಗೆ ಬಹು ದೊಡ್ಡ ಸಂಭ್ರಮವೆಂಬಂತೆ ಆಚರಣೆ. ಸೆಕ್ಸ್‌ನ್ನು ಊಟ, ನಿದ್ರೆ, ದಾಹದಷ್ಟೆ ಸಾಮಾನ್ಯ ಸಂಗತಿ ಅನಿಸುವತನಕ, ಕುತೂಹಲ ತಣಿಸಲು ಹೆಣಗುವದನ್ನು ಕಂಡರೆ ಅಯ್ಯೋ ಎನಿಸುತ್ತದೆ. ಅಪರಿಮಿತ ದೇಹ ಸೌಂಧರ್ಯ ಹೆಚ್ಚಿಸಿಕೊಂಡು ಸಂಗಾತಿಗಳಿಗಾಗಿ ಹುಡುಕಾಟ, ಸರಿಹೊಂದುವವರು ಸಿಗದಿದ್ದರೆ ಏನಂತೆ? ಲೆಸ್ಬಿಯನ್ ಗಳಿಗೆನು ಕೊರತೆ?
ಪುಕ್ಕಟೆಯಾಗಿ ಲಭ್ಯವಾಗುವ ವೆಬ್ ಸೈಟುಗಳು, ಅಲ್ಲಿನ ಲೈಂಗಿಕ ದೃಶ್ಯಾವಳಿಗಳು, ಯುವಕರನ್ನು ಅಡ್ಡ ದಾರಿ ಹಿಡಿಸಲು ಕೈ ಮಾಡಿ ಕರೆಯುತ್ತವೆ. ಧ್ಯಾನಸ್ಥ ಸ್ಥಿತಿಯಲ್ಲಿ ಅಧ್ಯಯನ ಮಾಡುವ ಹಂತದಲ್ಲಿರದೇ ತಮ್ಮದೆ ವಿಕಾರ ಮಾರ್ಗ ಸೃಷ್ಟಿಸಿಕೊಂಡು ಬಿಡುತ್ತಾರೆ.
ಇಷ್ಟೊಂದು ಮುಕ್ತ ವಾತಾವರಣ ಬೇಕೆ? ಎಂಬ ಚಿಂತನೆ ಆರಂಭವಾಗಿದೆ. ಆದರೆ ಕಾಲ ಮಿಂಚಿ ಹೋಗಿದೆ. ಹೊಸ ಸೂತ್ರ ಕಂಡು ಹಿಡಿದು ಹಾಳಾಗುತ್ತಿರುವ ಮುಗ್ಧರನ್ನು ಸರಿದಾರಿಗೆ ತರುವ ತಾಕತ್ತು ಇಲ್ಲವೇ ಇಲ್ಲ. ಹಾಗಂತ ಸರಕಾರ ಕೈ ಚಲ್ಲಿ ಕುಳಿತಿಲ್ಲ ಭಾರತೀಯ ಪುರಾತನ ಯೋಗ, ಧ್ಯಾನ ಸೂತ್ರಗಳ ಮೊರೆ ಹೊಗುತ್ತಲಿದೆ. ಏಕಾಗ್ರತೆಯ ಕುರಿತು ಪಾಠಗಳು ಪ್ರಾರಂಭವಾದರೆ ವ್ಯಂಗ್ಯವೆಂಬಂತೆ ಮತ್ತೊಂದೆಡೆ ಶೀಲ ಕಳೆದುಕೊಳ್ಳಲು ಆತುರರಾಗಿರುವ ಹುಡುಗಿಯರು ಸಂಗಾತಿಗಳ ಹುಡುಕಾಟದಲ್ಲಿದ್ದಾರೆ. ಇಲ್ಲಿನ ಪ್ರತಿಕೂಲ ಹವಾಮಾನ, ಅತಿಯಾದ ಮಾದಕ ದ್ರವ್ಯಗಳ ಸೇವನೆ ಪುರುಷ ಸಮುದಾಯವನ್ನು ದುರ್ಬಲಗೊಳಿಸಿದೆ ಎಂಬ ಗೊಂದಲ ಬೇರೆ. ಲೈಂಗಿಕವಾಗಿ ಶಕ್ತಿಹೀನರಂತಾದ ಯುವಕರು ಉತ್ತೇಜಿತರಾಗಲು ವಯಾಗ್ರದಂತಹ ಅಪಾಯಕಾರಿ ಡ್ರಗ್ ಗೆ ಬೆನ್ನು ಹತ್ತಿದ್ದು ಈಗ ಇತಿಹಾಸ. ಮೈ ಮನಗಳನ್ನು ಬೆಚ್ಚಗಾಗಿಸಿ ಉದ್ರೇಕಗೊಳ್ಳಲು ತಿಣುಕುವ ದೈನೇಸಿಗೆ ಅಯ್ಯೋ ಅನಿಸುತ್ತದೆ. ಇಲ್ಲಿನ ಹುಡುಗಿಯರ ಅಬ್‌ನಾರ್ಮಲ್ ಎದೆಕಾರಿಕೆಯನ್ನು ಕಂಡಾಗ ಅಚ್ಚರಿ ಬೆರಗು, ಎಲ್ಲ ಹಾರ್ಮೊನುಗಳ ಮಹಿಮೆ ಎಲ್ಲಂದರಲ್ಲಿ ಬಟ್ಟಬಿಚ್ಚಿ, ಅರೆಬೆತ್ತಲಾಗಿ, ಸಾರ್ವಜನಿಕವಾಗಿ ತೆರೆದುಕೊಳ್ಳುವ, ಅದನ್ನು ಯಾರೂ ಗಮನಿಸದೇ ತಮ್ಮ ಪಾಡಿಗೆ ತಾವಿರುವ ವಾತಾವರಣ ನೋಡಿದಾಗ ಅಯ್ಯೋ ಅನಿಸುತ್ತದೆ. ಅಂದಹಾಗೆ ಅಯ್ಯೋ ಅನಿಸುವುದು ಅವರನ್ನು ಕಂಡು ಅಲ್ಲ, ಒಂದು ವೇಳೆ ನಾನೂ ಒಂಟಿಯಾಗಿ ಬಂದಿದ್ದರೆ ಹೊಡೆಯಬಹುದಿದ್ದ ಲಾಟರಿ, ಒಳಗೊಳಗೆ ನನ್ನ ಬಗ್ಗೆ ಅಯ್ಯೋ ಅನಿಸಿತು. ಹೀಗೆ ಕನಸು ಕಂಡು ಮರುಗಿದ್ದನ್ನು ಯಾರಿಗೂ ದಯವಿಟ್ಟು ಹೇಳಬೇಡಿ . . . .

0 comments: