>> Thursday, April 4, 2019

*ಹಂಗಿಲ್ಲದ ಒಲವಮನೆ*

ಎದೆಯ ಗೂಡಲಿ‌‌ ಬರೀ ಒಲವ ವರತೆ
ಹರಿಯುತಿರಲು ಬೇಕಿಲ್ಲ ಬೇರೇನೂ

ನೀನೆಂದರೆ ಎಲ್ಲ ಏನೆಲ್ಲ ನನಗೆ ಇದು
ಬರೀ ದೇಹದಾಕರ್ಷಣೆಯ ಸೆಳೆತದ
ಸುಳಿಯಲ್ಲ‌

ಸೋತು ಬಿದ್ದ ಎದೆಗಾರಿಕೆ ಬತ್ತಿಹೋದ
ಚಂದ್ರಚಿಲುಮೆ ಸುಕ್ಕು ಹಿಡಿದ ಕೆನ್ನೆ

ಆದರೂ ನೀ ನನ್ನ ಪಾಲಿನ ಕನ್ಯೆ

ತುಟಿಯಂಚಿನ ಕಿರುನಗೆ ಒಳಗೆ
ಹರಿಯುತಿರುವ ಪ್ರೇಮಸೆಲೆಯಷ್ಟೇ
ಸಾಕು ಜೀವಸೆಲೆ ಚಿಮ್ಮುತಿರಲು

ದೇಹದಾಟಕೆ ಬೇಕಿಲ್ಲ ಉಕ್ಕಿ ಹರಿವ
ಯೌವನದ ಬೆಡಗು ಬಿನ್ನಾಣ

ಕಾಲದಾಚೆಗಿನ ಕಸರತ್ತು ಈ ಜೀವನೋ
ತ್ಸಾಹದ ಗಮ್ಮತ್ತು ಅಂಗಾಂಗಳ ಹಂಗು
ಮೀರಿದ ಕಸರತ್ತು

ಮುಪ್ಪಡರಿಹುದು ದೇಹಕೆಂಬುದೊಂದು
ಬರೀ ಭ್ರಾಂತು ಅರಳಿ ನಿಂತರೆ ಸಾಕು
ಮೈಮನಗಳಲಿ ಇನ್ನಿಲ್ಲದ ಜೀಕು ಠಾಕು
ಠೀಕು

ಹಗಲೂ ರಾತ್ರಿಯಾಗಿ ಬಿಲ್ಲು ಬಾಣ
ಹೆಗಲೇರಿ ಹಾರಿ ಹಾರಿ ನೆಗೆಯುತ
ತಪ್ಪದ ಗುರಿಗೆ ನಲುಗಿದ ಮೈಮಾಟ

ಕೊರಡು ಕೊನರಿ ಬರಡು ಹಯನಾಗಿ
ಜಿನುಗುವ ಪರಿಗೆ ಉಕ್ಕಿ ಹರಿಯುವ
ಜೀವಸೆಲೆ ತಟಗುಡಲು ಮುಗಿಯದ
ದೇಹದಾಟ ಮತ್ತೆ ಮತ್ತೆ ಕೆರಳುವ ಮೈ
ಮಾಟ

ಇಲ್ಲಿ ಇಲ್ಲವೇ ಇಲ್ಲ ಇರಲಸಾಧ್ಯ ವಯಸಿನ
ಹಂಗು ರೋಗ ರುಜಿನಗಳ ಗುಂಗು

ವೈದ್ಯರು ಬೆಚ್ಚಿಬಿದ್ದು ಓಡಿಯಾರು ಗೂಳಿ
ಕಾಳಗಕೆ ಬೆದರಿ ಗುಟುರು ಹಾಕಿ ನುಸುಳುವ
ಈ ಪರಿಗೆ

ಒಂದಲ್ಲ ಎರಡಲ್ಲ ಮೂರು ಸುತ್ತಿಗೂ
ಮುಗಿಯದಾಟಕೆ ಸೋಲು ಗೆಲುವಿನ
ಸೋಂಕಿಲ್ಲ‌ ಗೆದ್ದೆನೆಂಬ ಬಿಂಕವೂ ಇಲ್ಲ

ಕಸುವು ಕಳೆಯುವವರೆಗೆ ದೇಹದಾಟ
ಮುಗಿದ ಮೇಲೆ ಇರಲಿ ಬರೀ ಒಲವಿನಾಟ

ದೇಹದಾಚೆಗಿನ ಈ ಅನುಸಂಧಾನಕೆ ದೇಹ
ದಾಟ ಬರೀ ಒಂದರಗಳಿಗೆಯ ಮೋಜು

ಊಹಿಸಿರಲ್ಲ ನೀ ನಾ ಇದನು ಹೀಗೆ ಹಾಗೆ
ಆಗಬಹುದೆಂದು ಆಗಿ ಹೋಯಿತಷ್ಟೇ ನಮ್ಮ
ಮಿಲನ ಸಡಗರಕೆಂದು

ಸಾಕಲ್ಲ ಸಖೀ ಈ ಜನುಮಕಿಷ್ಟು ಬಯಸದೇ
ಬಂದ ಭಾಗ್ಯವಿಂದು

ಸೋತರೂ ಖುಷಿ ಗೆದ್ದರೂ ಖುಷಿ
ಸೋಲು ಗೆಲುವು ಮೀರಿದೊಲವ
ವಾರಸುದಾರರು ನಾವಿಂದು

ಮುಂದೆ ಮತ್ತೆ ಮತ್ತೆ ಮತ್ತು ಮುತ್ತಿನ
ಸಡಗರದಲಿ ಮೈಮರೆಯೋಣ ದೇಹದ
ಹಂಗು ಹರಿದು ಕಾಲನ ಕರೆಯ ಮರೆತು

*ಅವನಿಹನು ನಮ್ಮ ಕೈಹಿಡಿದು
ನಡೆಸಲೆಂದು ನಿಶ್ಚಿಂತರಾಗಿ ಸಾಗುತಲೇ
ಇರೋಣ...*.

----ಸಿದ್ದು ಯಾಪಲಪರವಿ.

Read more...