ಧರೆಹತ್ತಿ ಉರಿದೊಡೆ

>> Tuesday, April 20, 2010


ಅಹೋರಾತ್ರಿ ಸುರಿದ ಮಳೆ ಚಿನ್ನಾರಿಯನ್ನು ಕಂಗೆಡಿಸಿತ್ತು. ಗದ್ದ್ಯಾನ ಸಸಿ ಮಡಿ ಹಚ್ಚೋ ಕೆಲಸ ನಡೆದಿತ್ತು. ಧಣಿ ಶಂಕ್ರಣ್ಣ ಹಗಲು ರಾತ್ರಿ ಏಕ ಮಾಡಿ ಊರೂರು ತಿರುಗೋದಂದ್ರ ಜೀವಕ್ಕ ಚೈತನ್ಯ ಬರುತ್ತಿತ್ತು. ಚಿನ್ನಾರಿನ ಭಾಳ ಪ್ರೀತಿಯಿಂದ ಸಾಕಿದ್ದ ಕರಿಯ ಸದಾ ಕೆಸರಿನಾಗ ಹುಮ್ಮಸ್ಸಿನಿಂದ ಕೆಲಸ ಮಾಡ್ತಿದ್ದ. ಧಣಿ ಹೆಂಡ್ತಿ ಸೀತಮ್ಮ ಹಗಲೆಲ್ಲ ಗದ್ಯಾಗ ತಿರುಗಾಡಿ ಆಳು-ಕಾಳಿನ ಲೆಕ್ಕ ಇಟ್ರ, ಧಣಿ ಯಾವಾಗಲಾದರೊಮ್ಮೆ ಗದ್ದಿಗೆ ಗೂಳಿ ಹಂಗ ನುಗ್ಗಿ ತನ್ನ ಲೆಕ್ಕಾಚಾರದಲ್ಲಿಯೇ ಇರುತ್ತಿದ್ದ. ಕರಿಯ ಚಿನ್ನಾರಿಗೆ ಹಗಲು ರಾತ್ರಿ ನದಿ ದಂಡ್ಯಾಗಿನ ನೂರು ಎಕರೆ ಗದ್ಯಾಗ ಓಡಾಡಿಕೊಂಡು ಇರೋದಂದ್ರ ಎಂಥಾ ಖುಷಿ. ಮೈ ಕೆಸರಾಗಿಸಿ ಹಗಲಿರುಳು ದುಡಿಯುತ್ತಿದ್ದ ಕರಿಯನಿಗೆ ಚಿನ್ನಾರಿ ಎಂದರೆ ಪಂಚಪ್ರಾಣ ಹೆಂಡತಿ ಚಂದುಳ್ಳಿ ಚಲುವಿ ನಾಗಿಗಿಂತ ಕರಿಯ ಚಿನ್ನಾರಿಯನ್ನೇ ಹೆಚ್ಚು ಪ್ರೀತಿಸುತ್ತಿದ್ದ. ಹಾಗಂತ ನಾಗಿಯನ್ನು ಉಪೇಕ್ಷಿಸಿರಲಿಲ್ಲ.ಚಿನ್ನಾರಿಗೆ ಮೈ ತೊಳೆಸಿ ನಾಗಿಣಿ ತಂದ ಬುತ್ತಿಯಲ್ಲಿ ಅದಕ್ಕೂ ತಿನ್ನಿಸಿ ಖುಷಿ ಪಡುತ್ತಿದ್ದ. ಈ ಮಳೆಗಾಲದಲ್ಲೂ ಉರಿಯುವ ಬಿಸಿಲು ಬಯಲು ಸೀಮೆಯ ಸಂಪತ್ತು. ಕರಿಯನಿಗೆ ಬಿಸಿಲೆಂದರೆ ಎಲ್ಲಿಲ್ಲದ ಹಿತ. ಧಾರಾಕಾರ ಸುರಿವ ಬೆವರು ಸದಿಯಲ್ಲಿ ಈಜಿದಾಗ ಹರಿದು ತೇಲಾಡುತ್ತಿತ್ತು. ಮೇಲೆ ಸುಡುವ ಸೂರ್ಯ, ಮೈ ತುಂಬ ಚಿಮ್ಮುವ ಬೆವರು. ಈಜಿದಾಗ ಪುಳಕಗೊಳಿಸಲು ಸದಿ ಸಾಕಲ್ಲ ಕರಿಯನಿಗೆ ಖುಷಿ ಪಡಲು.ಧಣ್ಯಾರ ಮನೇಲಿ ಸೀತಮ್ಮಳ ಜೊತೆ ಆಳಿಗೆ ಆಳಾಗಿ ದುಡಿಯುತ್ತಿದ್ದ ಸಾಗಿ ಗದ್ಯಾಗಿನ ಗುಡಿಸಲು ಸೇರುವುದ ಸರಿ ರಾತ್ರಿಗೇನೆ.ಹೋದ ವರ್ಷ ಮೈ ನೆರೆತ ಕೂಡಲೆ ಗುಡಿಸಲು ಸೇರಿದ ಸಾಗಿಗೆ ಚಿಮ್ಮುವ ಉತ್ಸಾಹ. ಆಕರ್ಷಕ ಮೈ ಮಾಟಕ್ಕೆ ಖುಷಿ ಆಗುವಂತೆ ಆಟ ಆಡುವ ತಾಕತ್ತು ಕರಿಯನಲ್ಲಿ ಇತ್ತು. ಮಳೆಗಾಲದ ತುಂಬಿ ಹರಿಯುವ ನದಿಯನ್ನು ಸೀಳಿ ಈಜುವಂತೆ ನಾಗಿಯ ದೇಹಸಿರಿಯನ್ನು ಸೀಳಿ ಬಗೆಯುತ್ತಿದ್ದಕ್ಕೆ ರಾತ್ರಿ ಅಬ್ಬರಿಸುವ ಸದಿ ಸಾಕ್ಷಿಯಾಗುತ್ತಿತ್ತು. ನಿರ್ಜನ ಗದ್ದೆಯಲ್ಲಿ ಯಾರ ಹಂಗೂ ಇಲ್ಲದ ಈ ಜೋಡಿ ಜೀವಗಳಿಗೆ ಹರಿಯುವ ನದಿ,ಬೆಳಗುವ ಕಂದೀಲು, ಕತ್ತಲಲ್ಲಿಯೂ ನೆರಳು ಕಂಡರೆ ಅಬ್ಬರಿಸುವ ಚಿನ್ನಾರಿ. ಬೋ ಎಂದು ಬೆನ್ನು ಹತ್ತಿದರೆ ಹುಲಿ ಕೂಡಾ ಬೆದರುವಂತಿತ್ತು. ರಾತ್ರಿ ಹಾಸಿಗೆಯಲಿ ಹುಲಿಯಂತೆ ಬೇಟೆ ಆಡಲು ಕರಿಯನಿಗೆ ನಾಗಿ ಇದ್ದರೆ, ಹಗಲು ಕಾಲ ಕಳೆಯಲು ಚಿನ್ನಾರಿ ಇದ್ದ. ಹೀಗೆ ಹಗಲು ರಾತ್ರಿ ಚಿನ್ನಾಟವಾಡುವ ಕರಿಯನ ಪಾಲಿನ ಸ್ವರ್ಗ ಶಂಕರಣ್ಣ ಧಣಿಯ ಗದ್ದೆಯಲಿ ಮೈಮುರಿಯುವದರಲಿ ಇತ್ತು.ಒಂದು ದಿನ ಸೀತಮ್ಮ ಸೌಕಾರ್ತಿ ಬುತ್ತಿ ತರಲಿಲ್ಲ. ಹಸಿದ ಚಿನ್ನಾರಿ ಮುಖ ಒಣಗಿಸಿಕೊಂಡು ಕುಳಿತಿದ್ದು ನೋಡಿ ಕರಿಯನ ಕರುಳು ಚುರಕ್ ಅಂತು. ಬಾಜು ಗದ್ಯಾಗಿನ ಯಮನಪ್ಪನ ಮಾತಾಡೋಸ ನೆಪದಾಗ ಎರಡು ರೊಟ್ಟಿ ಇಸಗೊಂಡು ಚಿನ್ನಾರಿಗೆ ತಿನಿಸಿ ತಾನು ಗಟ,ಗಟ ನೀರು ಕುಡಿದಿದ್ದ.ಈ ಏಕತಾನತೆಯ ಬದುಕಿಗೆಂದು ಬ್ಯಾಸರಿಕಿ ಮಾಡಿಕೊಳ್ಳದ ಕರಿಯನಿಗೆ ರಾತ್ರಿ ನಾಗಿಯ ಸುಖ ಹೊಸಲೋಕಕ್ಕೆ ಎಳೆದೊಯ್ಯುತ್ತಿತ್ತು. ಹಸಿರಿನಿಂದ ಕಂಗೊಳಿಸುವ ನೆಲ್ಲೆನ ಪೈರು, ಸಂಭ್ರಮದಿಂದ ತುಳುಕುವ ನಾಗಿಯ ದೇಹಸಿರಿಯನ್ನು ಸಮೀಕರಿಸಿಕೊಂಡು ಒಮ್ಮೊಮ್ಮೆ ತನ್ನಷ್ಟಕ್ಕೆ ತಾನೇ ಕುಣಿಯುತ್ತಿದ್ದ. ನಾಗಿಗೆ ಪೋತನಾಳ ವಗ್ಗರಣಿ ತಿನ್ನಂಗ ಆದರೆ ಉರಿ ಬಿಸಿಲಾಗ ಹರದಾರಿ ನಡದು ಬಿಸಿ ವಗ್ಗರಣಿ ಕಟ್ಟಿಕೊಂಡು ಬರು ಮುಂದ ಆರಬಾರ್‍ದು ಅನ್ನೋ ಸಂಕಟಕ್ಕ ಅವರಿವರ್‍ನ ಕಾಡಿ ಬೇಡಿ ಗಾಡಿ ಹಿಡಿತಿದ್ದ. ಜೀರ ಹನುಮಂತನ ತೋಟದಾಗಿನ ಹೂ ತಂದು ನಾಗಿಣಿ ಮುಡಿ ಏರಿಸುತ್ತಿದ್ದ. ಒಂದು ದಿನ ಸಂಜೀ ಮುಂದ ಧಣಿ ಶಂಕರಣ್ಣ ತನ್ನ ಪಟಪಟಿ ಮ್ಯಾಲೆ ನಾಗಿನ ಹೇರಿಕೊಂಡು ಬಂದು ಗದ್ದೀಗೆ ಇಳಿಸಿ ಹೋದಾಗ ಭಾಳ ಖುಷಿಪಟ್ಟಿದ್ದ.ಧಣೀರಿಗೆ ಆಳೆಂದರ ಎಂತ ಪ್ರೀತಿ ಎಂದು ಉಬ್ಬಿ ಹೋಗಿದ್ದ. ಅದ ಸಂಜೀಗೆ ಧಣಿ ಪಟಪಟಿ ಸಪ್ಪಳ ಮಾಡ್ತಾ ರಾಗಲಪರ್ವಿ ದಾರಿ ಹಿಡಿದು ಯಾಕ ಹೋದ್ರು ಅಂತ ಕರಿಯನಿಗೆ ತಿಳೀಲಿಲ್ಲ. ಅದನ್ನ ತಿಳಿಕೊಳಾಕ ಅಂತ ತೆಲಿ ಕೆಡಿಸಿಕೊಳ್ಳಲಿಲ್ಲ.ಧಣಿಯನ್ನು ಕಂಡ ಕೂಡಲೆ ಪ್ರೀತಿಯಿಂದ ಬಾಲ ಆಡಿಸುತ್ತಿದ್ದ ಚಿನ್ನಾರಿ ಧಣ್ಯಾರ ಸನ್ಯಾಕ ಹಾಯಿತಿದ್ದಿಲ್ಲ. ಕರಿಯ ಮೈದಡವಿ ನಾಗಿ ತಂದ ಬುತ್ತಿ ತಿನ್ನಿಸಿ, ನಾ ಮಕ್ಕಳ್ಳೆನೆಲೆ ಎಂದಾಗ ಕುಂಯ್ ಗುಡುತ್ತಿದ್ದ.ಮರುದಿನ ಉರಿಬಿಸಿಲಾಗ ಗದ್ದಿಗೆ ಬಂದ ಧಣಿ ನದ್ಯಾಗ ಒಂದು ದಮ್ ಈಜಾಡಿ ಕರಿಯನ ಗುಡಿಸಲ್ಯಾಗಿನ ಒಗದ ದೋತ್ರದ್ಲೇ ಮೈ ಒರೆಸಿಕೊಂಡು ಕೊಳ್ಳಾಗಿನ ಥಳ ಹೊಳೆಯೋ ಬಂಗಾರದ ಚೈನ್ ಮ್ಯಾಲೆ ಕೈ ಆಡಿಸಿಕೊಂತ ಹೇಳಿದ, ಲೇ ಕರಿಯ ನಾಳೆ ಸ್ವಲುಪು ಜವುಳಗೇರಿಗೆ ವೋಗಿ ಐನಾರ್ ರುದ್ರಯ್ಯಂತಾಗ ರಕ್ಕ ಇಸ್ಕಂಬರ್‍ತಿಯನಲೇ, ಆ ಮಿಂಡ್ರಗುಟ್ಟಿದ ಸಂಗ್ಯಾ ಗಹೋದ ಸೆಂತಿ ದಿನ್ಯಾನ ಏಳಿದ್ದೆ.ಹೂಂ ದಣಿ ಈಸ್ಕಂಬರ್‍ತ್ನಿ ಅಂತೇಳಿ ಕುಂಡಿ ಕೆರಕಂತ ಬೊಗಳಿ ರುದ್ರಯ್ಯ ತಾತ ಜವುಳಿಗೇರ್‍ಯಾಗ ಇದ್ದಿಲ್ಲ, ನೀರಮಾನ್ವಿಗೆ ಹೋಗಿದ್ದ ಅಂತ ಬೊಗಳ್ದಾ. ನಾಕ ವರ್ಷದ ಹಿಂದ ಜವುಳಗೆರ್‍ಯಾಗ ಆತನ ಸಂಬಳದಾಳಿಗೆ ಜಗ್ಗಿ ಆರಾಮ್ ಇಲ್ಲ, ಸಿನ್ನೂರಾಗ ತೋರ್‍ಸಿದ್ರು ಕಮ್ಮಿ ಆಗಿಲ್ಲಂತೇಳಿ ರಾಯಚೂರಿಗೆ ಕರಕೊಂಡ್ಹೋಗೋದೈತಿ ಅಂತ ಅತ್ತ ಸಾವಿರ ಇಸ್ಕಂಡಿದ್ದ. ನಾನು ಅಂಬಾಮಟ ಜಾತ್ರ್ಯಾಗ ಸಿಕ್ಕಾಗೆಲ್ಲ ಕೇಳಿದ್ಮೇಲೆ ಅರ ಇಲ್ಲ ಸಿವಾ ಇಲ್ಲ ಉಂ ಅಂತಿದ್ದ. ಎಳ್ಡ ತಿಂಗ್ಳ ಇಂದ ಪೋತ್ನಾಳ ಬಸ್ ಸ್ಟ್ಯಾಂಡ್‌ನ್ಯಾಗೆ ಆ ತಾತನ್ನ ಕೇಳ್ದೆ ಏನಪ್ಪ ತಾತ ನಿಮ್ಮ ಆಳ ಅದಾನ ಎನ್ ಶಟದ್ನಾ ಅಂತಾ. ಇಲ್ಲ ದಣಿ ಅದೇನಾ ಗಾಳಿ ಶಕ ಅಂದ್ರಪೋ ಅದ್ಕ ಎರ್‍ಡ ತಿಂಗಳಿನಿಂದ ಆಯನೊರ ದರ್ಗಾದಾಗ ಇಟ್ಟಿನೆಪೋ, ಆ ಸೂಳೆಮಗ್ಗ ಆರಾಂ ಆಗಲಿಲ್ಲ ನಾನ್ ಎಂಗರ್ ಮಾಡಿ ವಂದಿಸಿಕೊಡ್ತಿನಪ ಅಂದಿದ್ದ. ಏನ್ ಸೂಳೆಮಕ್ಳ ಏನ್ ಕತಿ. ಏಳರ್ ಉಚ್ ಸೂಳೆಮಕ್ಕಳಾದ್ರ, ಕೇಳಾರ್ ಉಚ್ಚ ಸೂಳೆಮಕ್ಳ ಆದಂಗ್ ಆಗೈತ್ಲೇ ಅಂತ ಧಣಿ ಒಂದ ನಮೂನಿ ಒಟಗುಟ್ಟಿದ. ಕರಿಯನಿಗೆ ಈ ಮಳೆಗಾಲದಾಗ ಪೋತ್ನಾಳಗೇ ಹೋಗಿ ಬಸ್ ಹಿಡಿದು ಜವುಳಗೇರಿಗೆ ಹೋಗದಂದ್ರ ಬ್ಯಾಡ ಆಗಿತ್ತು. ಚಿನ್ನಾರಿ, ಹೊಸದಾಗಿ ಲಗ್ನ ಆದ ನಾಗಿನ ಬಿಟ್ಟು ಹೋಗೋದಂತು ಮನಸೆ ಇರಲಿಲ್ಲ. ಆದ್ರ ಎಂದೂ ಧಣಿ ತನಗ ರೊಕ್ಕದ ದಗದ ಹೇಳಿದ್ದಿಲ್ಲ. ಅವನೌನ ಇವತ್ತೆದಕ ಉಳ ಕಡ್ದಾವನಪ ಅನಕಂತ ನೀರ್ ಹರಸಾಕ ಹೋದ. ಧಣೇರ ಒಂದೆರಡು ದಿವಸ ಬುಟ್ಟು ವೋತ್ನ ಬುಡ್ರಿ. ಗದ್ಯಾಗ ಇಟಕೊಂದ ದಗದ ಇಟಗಂಡು ತಾತಂತಲೆ ಏನ್ ರಕ್ಕ ಕೇಳಾಕ ವೋಗದಪೋ ಅಂದ. ಏಳದಷ್ಟ ಮಾಡಲೇ ಕರಿಯ ಗದ್ದೇನ ನಿಮ್ಮಪ್ಪನ ಜಾಗೀರೆನಪ, ಯಾ ಸೂಳೆಮಕ್ಕಳಾರ ಬಗಲಾಗ ಮಡಚಿ ಇಟಗೊಂಡ್ ಒಕ್ಕಾರನಂಗ್ ಮಾತಾಡ್ತಿಯಲಲೇ ಅನಕಂತ ದೋತ್ರ ಚುಂಗ್ ತಿಕ್ಕಿ,ತಿಕ್ಕಿ ಮುಕಳಿ ಮ್ಯಾಲ್ ಸಿಗಿಸಿಕೊಂಡ ರಿನ್ ಸಬಕಾರದಲೇ ಒಗ್ದ ದೋತ್ರ ಅದ್ರ ಚುಂಗು ನೋಡಿ ಕರಿಯ ಮನಸಿನ್ಯಾಗ ಅಲಾಲ ಅಂದ. ರೇಶ್ಮಿ ಜುಬ್ಬ, ಕೊಳ್ಳಗಿನ ಚೈನು, ಬಗಲಾಗಿನ ಬಂಗಾರದ ಗುಂಡಗಡಿಗಿ ಥಳ ಥಳ ಅಂತಿತ್ತು.ಮುಂದಿನ ವಾರ ಗೊಬ್ಬರ ಇಡಬೆಕು ಅದ್ಕ ಇದ ವಾರ ವೋಗಿ ಬಂದ ಬುಡು ಎಂದೆನ್ನುತ್ತಾ ಕರಿಯನ ಮಾತನ್ನ ಲೆಕ್ಕಿಸದೇ ಧಣಿ ಪಟಪಟಿ ಏರಿದ.ರಾತ್ರಿ ನಾಗಿ ಮುಂದ ಕರಿಯ ಒಟಗುಟ್ಟಿದ, ಎನಲೇ ನಮ್ ದಣಿಗೇನ್ ಕುಂಡ್ಯಾಗ ಉಳ ಕಡ್ಯಾಕತ್ಯಾವನ, ನನಗ ಜವುಳಗೇರಿಗೆ ವೋಗಿ ರಕ್ಕ ಇಸಗಂಡ್ ಬಾ ಅನ್ನಾಕತ್ಯಾನ. ಬರ್ ಬರ್ ಅಂತ ಅಡ್ಯಾಡ ಲಾರಿ, ಬಸ್ಸು ನೋಡಿದ್ರನ ಮೈ ತಿರಗಿದಂಗ ಆತೈತಿ. ಐದು ವರ್ಷದ ಕೆಳಗೆ ಪೋತ್ನಾಳಗೆ ವೋಗಿ, ಮಾನ್ವಿಗೆ ವೋಗಾಕ ಅಂತ ಬಸ್ ಅತ್ತಿದ್ರ ಅವನಮ್ಮನ ಸುರು ಆಗಿದ್ದ ವಾಂತಿ ನಿಂದ್ರಲೇ ಇಲ್ಲ. ಬಸ್‌ನ್ಯಾಗ ಇದ್ದ ಬ್ಯಾಡರ ಕಲ್ಲಪ್ಪ ಮಕ,ಮಕ ಅಂದ್ನಲೇ ಲೇ ಕರಿಯ ಅಲ್ಲೇ ಊರಾಗ ಇರದ ಬುಟ್ಟು ದೊಡ್ಡ ನವಾಬ್ ಸೂಳೆಮಕ್ಳಂಗ ಊರೂರು ಅಡ್ಡಾಡತ್ರನೆಲೇ, ಕೈಯಾಗ ಒಂದ್ ನಿಂಬೆಣ್ಣ ಇಡಕಂಡ್ ಬರ ಬಕು ಇಲ್ಲಂದ್ರ ಮಕ್ಳ ಟಿಂಪಿ ಒಳಗರ ವೋಗಬಕಲೆ ಅಂತ ಬೈದದ್ದ್ ಅಲ್ದ ಅಲ್ಲಿದ್ದರೆಲ್ಲ ಅಚ್ಚಲೇ ಅಂದ್ರು. ಅದ್ಕ ಒಲ್ಲೆನಸ್ತೈತಿ. ಬ್ಯಾಡ ಅಂದ್ರ ದಣಿ ಬುಡಂಗ್ ಕಾಣಂಗಿಲ್ಲ. ಆತ ಬಾಳ ಕಿರಿ ಕಿರಿ ಅಂದ್ರ ನಾಳೇರ ನಾಡ್ದರ ವೋತ್ನಿ ನೀ ಸ್ವಲ್ಪ ಜ್ವಾಕಂದೇ ಅಂದ. ಆತು ನೀ ಬರತನ ನಾ ಅಲ್ಲೇ ಮನ್ಯಾಗ ಮಕ್ಕಂತ್ನು ಅವ್ವಗ ಏಳಿ ವೋಗು.ನೀ ಬಂದ ಮ್ಯಾಲೇನ ಗದ್ದೀಗಿ ಬರಕಿ ನೋಡ್. ಇಲ್ಲಂದ್ರ ಇಲ್ಯಾವನ ಇರ್‍ತಾನ ಅಂದಳು. ಹತ್ತುವುದು, ಇಳಿಯುವುದು ಮುಗಿದರೆ ಕರಿಯನಿಗೆ ಕಣ್ಣಿಗೆ ಕಣ್ಣು ಕೂಡಲಿಲ್ಲ. ನಿದ್ರೆ ಬರಲಿಲ್ಲ.ಕಬರ್ ಇಲ್ಲದಂಗ್ ಮಲಗಿದ ನಾಗಿನೊಮ್ಮೆ ನೋಡಿ ನಿಟ್ಟುಸಿರು ಬಿಟ್ಟು ಕರ್ ಅಂತ ಸಪ್ಪಳ ಮಾಡಿದ ಬಾಗಿಲು ತೆಗೆದು ಹೊರ ಬಂದ ಸಪ್ಪಳಕೆ ಚಿನ್ನಾರಿ ಬೌ ಎಂದಿತು. ನಾನಳಪೋ ಮಗನ ಬಾರಿ ಉಶ್ಯಾರದಿ ಬಿಡಲೆ ಅಂದ. ದಪ,ದಪ ಹರಿಯೋ ನೀರಿನ ಸಪ್ಪಳ, ಸೊಂಯ್ ಅನ್ನೋ ಗಾಳಿ ಬಿಟ್ರ ಬ್ಯಾರೆ ಏನೂ ಕೇಳಿಸಲಿಲ್ಲ. ಒಳಗೋಗಿ ಕಂದೀಲು ಸಣ್ಣ ಮಾಡಿ ಮತ್ತೊಮ್ಮೆ ದಣಿವಾರಿಸಾಕ ಉಳ್ಳಾಡಿದ. ಎಷ್ಟ ದಣಿದರೂ ನಿದ್ದೆ ಬರಲೇ ಇಲ್ಲ. ಮತ್ತೊಮ್ಮೆ ಬಾಗಿಲು ತಗದು ಕಾಲು ಮಡ್ದ ಹರಿದು ಹೋದ ಉಚ್ಚೀನ ದಿಟ್ಟಿಸಿ ನೋಡಿ ಮೈ ಯಾಕ ನಡಿಗಿದಂಗ್ ಆತು. ಹೋಗೋ ನಿಮ್ಮೌನು ಅಂತ ಬೈಕಂಡು ಗುಡಿಸಲು ಸೇರಿದ.೨ಮರುದಿನ ಮುಂಜಾನೆ ಬುತ್ತಿ ಕಟ್ಟಿಕೊಂಡು ಪೋತ್ನಾಳ ದಾರಿ ಹಿಡಿದ.ವಾಂತಿ ಆಗಬಾರ್‍ದು ಅಂತ ನಾಕೈದು ನಿಂಬೆ ಹಣ್ಣು ತಗೊಂಡ. ಧಣಿ ಹೋಗೋ ಮುಂದ ಮತ್ತೊಂದು ಹೊಸ ಕೆಲಸ ಹಚ್ಚಿದ. ಜವುಳಗೆರ್‍ಯಾಗ ಐನಾರ್ ಕಡೆ ರಕ್ಕ ಇಸಗಂಡು, ಸೀದಾ ಅಂಗ್ ನೀರ್‌ಮಾನ್ವಿಗೆ ವೋಗಿ ಮಾಸ್ತರ ಮಂಜಪ್ಪನ ಕಡೆ ವೋಗು.ವೋದ ವರ್ಸ ತಗಂಡ ಮ್ಯಾಗಡೆ ಹೊಲ್ದ ಖರೀದಿ ಪಾಣಿ ಅವರಿಗೆ ಕೊಟ್ಟಿದ್ದೆ ಅಂದಾಗ ಕರಿಯನ ಎದಿ ದಸಕ್ ಅಂತು. ಇದೇನ್ ಕತೀಲೆ ಎಪ್ಪಾ ಅನ್ನಂಗಿಲ್ಲ ಆಡಂಗಿಲ್ಲ ಅನುಕೊಂತಾ ಮನೀಗೆ ಹೋಗಿ ನಾಗಿಗೆ ಏನರ ಹೇಳನ ಅನ್ನಿಸಿದ್ರು ಊರ್ ಹಾದಿ ಹಿಡಿದ. ಹೋಗು ಮುಂದ ಚಿನ್ನಾರಿಗೆ ಮೈದಡುವುತ್ತ ಪ್ರೀತಿ ಮಾಡಿ ಉಸ್ಯಾರಲೇ ಚಿನ್ನು ನಾ ಬರಮಟ ಎಲ್ಲಾ ಜ್ವಾಕೆಂದೇ ಎಂದ. ಪ್ರೀತಿಯಿಂದ ಬಾಲ ಅಲ್ಲಾಡಿಸಿದ ಚಿನ್ನಾರಿ ಊರ್ ದಾಟುಮಟ ಬಂತು. ಗದ್ದೆಯಲ್ಲಿ ಇದ್ದ ಆಳುಕಾಳೆಲ್ಲ, ಏನಪ ಕರಿಯ ಅದನ್ನ್ ಕರಕಂಡ್ ವೋಗಲೇ, ನಾವೆಲ್ಲ ಮನಶರ ಕಂಡಂಗ್ ಕಾಣವಲ್ದನು ನಿನ್ನ ನಾಯಿ ಮಗಂದಕ್ಕ ಅಂದರು. ಬಿಸಿಲು ಏರೋದ್ರೊಳಗ, ಸಾಧ್ಯ ಆದ್ರ ಇವತ್ತ ಎರಡು ಊರಿಗೆ ಹೋಗಿ ಬರಬೇಕು ಅನಕೊಂಡ ಜವುಳಗೇರಿಯಲಿ ಸಿಕ್ಕ ರುದ್ರಯ್ಯ ಕಾಟಾಚಾರಕ್ಕೆ ಐದುನೂರು ಕೊಟ್ಟ. ಅಲ್ಲಿಂದ ದಡಬಡಿಸಿಕೊಂಡು ನೀರ್‌ಮಾನ್ವಿ ಹಾದಿ ಹಿಡಿದ ಅನ ಕಂಡಂಗ ಮಾಸ್ತರ ಮಂಜಪ್ಪ ಪಾಣಿ ಕೊಡ್ತಾನೋ ಇಲ್ಲೋ ಅನಕೊಂಡ ಅರ್ಧದಾರಿಗೆ ಹೋದ ಮೇಲೆ ಕರಿಯನಿಗೆ ಏನೋ ನೆನಪಾಯಿತು. ಅಲ್ಲಾ ಧಣೇರು ಜವುಳಿಗೇರಿಗೆ ರಕ್ಕ ತರಾಕ ತನ್ನ ಕಳಿಸ್ಲಿ ಪಾಣಿ ತರಾಕ ತಾವ ಹೋಗಬಹುದಿತ್ತಲ್ಲ ಎಂದು ತಲೆಕೆರೆದುಕೊಂಡ ಬೇಕಂದಾಗ ಸೈಕಲ್ ಮೋಟಾರ್ ಮೇಲೆ ರಾಯಚೂರಿಗೆ, ಸಿನ್ನುರಿಗೆ, ಗಂಗಾವತಿಗೂ ಹೋಗುವ ಧಣೇರು ತನ್ಯಾಕ ಕಳಿಸಿದ್ರು ಎಂಬುದು ತಿಳೀಲೇ ಇಲ್ಲ. ದೊಡ್ಡರ್‍ದು ನೇಲಿನ ತಿಳೆಂಗಿಲ್ಲ ಬಿಡ್ಲೆ ಅವನವ್ವನ ಅಂತ ಬೈಕೊಂಡು ನೀರ್‌ಮಾನ್ವಿಕಡೆ ಹರದು ಹೋದ.೩ಇತ್ತ ಚಿನ್ನಾರಿ ರಾತ್ರಿಯೆಲ್ಲ ಏಕಾಂಗಿಯಾಗಿ, ಹಗಲು ಹಾಕಿದ ಬುತ್ತಿಯನ್ನು ಸರಿಯಾಗಿ ತಿನ್ನದೇ ಏನನ್ನೋ ಕಳಕೊಂಡ ಹಾಗೆ ನರಳಾಡಿದ..,ಮೊದಲನೇ ದಿನ ಸಂಜೀ ಮುಂದ ನಾಗಿಗೆ ಧಣೇರು ಹೇಳಿದರು, ನಾಳೆ ರಾತ್ರಿ ಕರಿಯ ಎಷ್ಟತ್ತಿದ್ರು ಬರ್‍ತಾನ, ನೀ ಮಕ್ಕಳಾಕ ಇಲ್ಲೆ ಬಂದ್ ಬುಡು. ಮದ್ಲ ಆ ಉಚ್ ಸುಳೆಮಗ್ಗ ನೀ ಇಲ್ಲಂದ್ರ ತೆಲೀನ ಕೆಡ್ತೈತಿ. ಎದೀ ಮ್ಯಾಲ ಸರಿಯಾಗಿ ಸೆರಗು ಹಕ್ಕೊಳ್ಳದಿದ್ದರೂ, ತೆಲೆಮ್ಯಾಲ ಸೆರಗು ಹಕ್ಕೋಳ್ಳದನ್ನು ಮರೆಯದ ನಾಗಿ ಊನ್ ಧಣಿ ಅಂದ್ಲು. ಧಣಿ ಜೊಲ್ಲು ಸುರಿಸಿಕೊಂಡು ನಾಗಿಯನ್ನು ನೋಡೋದು ಯಾಕೋ ಚಿನ್ನಾರಿಗೆ ಇಷ್ಟ ಆಗ್ಲಿಲ್ಲ. ಅಲ್ಲಿದ್ದ ಹತ್ತಾರು ಆಳುಗಳೊಂದಿಗೆ ನಾಗಿ ಧಣೇರ ಮನಿ ಸೇರಿಕೊಂಡ್ಲು.ಮರುದಿನ ಸಂಜೀಗೆ ಇರೋ ಎಲ್ಲಾ ತಯಾರಿಯೊಳಗ ಬಂದ ನಾಗಿಗೆ ಕರಿಯನ ಹಾದಿ ಕಾಯೋದ ಕೆಲ್ಸ ಆತು. ಸಂಜೀ ಏಳು ಆತು ಎಂಟ್ ಆತು ಕರಿಯನ ಸುದ್ದೀನ ಇಲ್ಲ. ಅಯ್ಯೋ ಎಪ್ಪಾ ಈತ ಬರಲಿಲ್ಲಂತ ಮದ್ಲ ಗೊತ್ತಿದ್ರ ಮನ್ಯಾಗಿರ್‍ತಿದ್ನಲ್ಲ ಅಂತ ಗೊಣಗಿದಳು. ಪಾಪ! ಚಿನ್ನಾರಿ ಅಸಹಾಯಕತೆಯಿಂದ ಅತ್ತಿಂದ ಇತ್ತ ಸುಳಿದಾಡುತ್ತಿತ್ತು.ಒಂಟಿ ರಾತ್ರಿ ಎಷ್ಟೊಂದು ನೀರವವಾಗಿರುತ್ತದೆ ಎಂದು ನಾಗಿ ಊಹಿಸಿರಲಿಲ್ಲ. ತನ್ನನ್ನು ಮಗಳಂಗ ಜೋಪಾನ ಮಾಡೋ ಸಾವಕಾರ್‍ತಿ ನೆನಪಾದ್ಲು. ಹುಲಿಯಂತೆ ಧಣೇರ್‍ನ ಆಕಿ ಎಂದು ನೋಡಿರಲಿಲ್ಲ. ಬ್ಯಾಡ, ಬ್ಯಾಡ ಅಂದ್ರು ಯಾಕ ನಾಗಿಗೆ ಹೆದರಿಕೆ ಅನ್ನೋದು ಹೋಗಲಿಲ್ಲ. ರಾತ್ರಿ ಸರ್ವಹೊತ್ತಿನ್ಯಾಗ ಧಣ್ಯಾರು ಬಂದಂಗ ಆತು. ನಿರ್ಜನ ರಾತ್ರಿಯಲ್ಲಿನ ಅವರ ಸೈಕಲ್ ಮೋಟಾರ್ ಸಪ್ಪಳ ನಾಗಿಯ ಮನಸ್ಸನ್ನು ಉಲ್ಲಸಿತಗೊಳಿಸಿತು. ಭಾಳ ತಡ ಆಗಿದ್ದರಿಂದ ಧಣೇರು ತನ್ನ ಕರಿಯನನ್ನು ಕರಕೊಂಡು ಬಂದಿರಬೇಕು ಅಂತ ಲೆಕ್ಕ ಹಾಕಿ ಬಾಗಿಲು ತೆಗೆದಾಗ ನಿರಾಶೆ ಕಾದಿತ್ತು. ಧಣೇರು ಒಬ್ಬರ ಬಂದಿದ್ದರು. ಏನ್ ನಾಗಿ ಕರಿಯ ಬಂದಿಲ್ಲನು. ಚಂಜೀಗ ಬರಬೇಕಿತ್ತು ಅಂದಾಗ ಎದೆ ಧಸಕ್ ಎಂದಿತು.ನಿರಾಶೆಗೊಂಡ ಚಿನ್ನಾರಿ ಧಣೇರನ್ನು ದುರುಗುಟ್ಟಿಕೊಂಡು ನೋಡಿ ವಿಕಾರವಾಗಿ ಚೀರ ಹತ್ತಿದ. ಚಿನ್ನಾರಿಯ ವಿಕಾರ ನರಳಾಟ ನಾಗಿಗೆ ತಳಮಳ ಎನಿಸಿತು. ನಾಗಿ ನಾ ಇನ್ನೊಂದು ತಾಸ್ ಇಲ್ಲೆ ಇರ್‍ತೀನಿ ನೀ ಏನು ಅಂಜಬ್ಯಾಡೇಳು ಅಂದ ಧಣಿ ಕಾಲುವೆ ದಂಡಿ ಕಡೆ ದಾಪುಗಾಲು ಹಾಕಿದ. ಒಳಬಂದು ಚಿಲಕ ಹಾಕಿದ ನಾಗಿ ಹಾಸಿಗಿ ಹಿಡಿಯಲು ಯತ್ನಿಸಿದಳು ಸ್ವಲ್ಪ ಹೊತ್ತಿನ ನಂತರ ಚಿನ್ನಾರಿ ಬೌ ಎಂದು ವಿಕಾರವಾಗಿ ಬೊಗಳಹತ್ತಿದ. ಒಮ್ಮಿಂದೊಮ್ಮೆಲೆ ಚಿನ್ನಾರಿ ಜೋರಾಗಿ ಬೊಗಳಹತ್ತಿದ. ಯಾರೋ ಮೈಮೇಲೆ ದಾಳಿ ಮಾಡಿದವರ ಹಾಗೆ ಜೋರಾಗಿ ಕಿರುಚಾಡಲು ಪ್ರಾರಂಭಿಸಿದ. ಚಿನ್ನಾರಿ ಕೂಗು ಕೆಲ ನಿಮಿಷಗಳ ತೀವ್ರ ಸೆಣಸಾಟದಿಂದ ನಿಂತಂತೆ ಅನಿಸಿತು. ಎದ್ದು ನಿಂತು ಏನಾಯಿತು ನೋಡಬೆಕೆನ್ನುವ ಕುತೂಹಲವಿದ್ದರೂ ಧೈರ್ಯ ಸಾಲಲಿಲ್ಲ. ಕಾಲಾಗಿನ ಕೌದಿ ಹೊದ್ದುಕೊಂಡು ಮಲಗಲೆತ್ನಿಸಿದಳು. ಮಧ್ಯೆರಾತ್ರಿ ಕಣ್ಣು ಬಿಟ್ಟಾಗ ಏನೋ ಮೈಮೇಲೆ ಹರದಾಡದಂಗ ಆತು. ಮೈಯೆಲ್ಲ ಭಾರ. ಹಾವು ಹರದಾಡಿದ ಸಪ್ಪಳ ಏನೋ ಅರಿಯಲಾಗದ ಹಿಂಸೆ. ತಲೆಸುತ್ತಿ ಬಂದಂತಾಗಿ ಎಚ್ಚರಾಗಲೇ ಇಲ್ಲ.೪ಮಾಸ್ತರ ಕೊಟ್ಟ ಪಾಣಿ ಹಿಡಕೊಂಡು ಗದ್ಯಾಗ ಒಮ್ಮೆ ಹಾದು ಚಿನ್ನಾರಿನ ಕಂಡು ನಂತರ ಮನೀಗೆ ಹೋಗಿ ನಾಗಿನ ಕಂಡರಾತು ಎಂದು ಲೆಕ್ಕ ಹಾಕಿದ. ಅಂದು ಸೋಮವಾರ ಸಂತಿ ಇದ್ದದಕ ಆಳುಗಳು ಯಾರೂ ಇರಲಿಲ್ಲ. ಚಿನ್ನಾರಿಗಾಗಿ ಕುತೂಹಲದಿಂದ ಹುಡುಕಿದ. ತನ್ನ ಗುಡಿಸಲು ಮುಂದ ಚಿನ್ನಾರಿ ಅನಾಥವಾಗಿ ಬಾಯಿ ತೆಗೆದುಕೊಂಡು ಬಿದ್ದಿದ್ದ. ಗಾಭರಿಯಾದ ಕರಿಯ ಹತ್ತಿರ ಹೋಗಿ ಮೈದಡವಿದ ಮೈ ಜುಂ ಎಂದಿತು. ಚಿನ್ನಾರಿಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಮಕ್ಕೊಂಡ ಕೂಸಿನ ಕಪಾಳ ಸವರು ಹಂಗ ಮುಖ ಎಲ್ಲ ಸವರಿದ. ಮೈ ಎಲ್ಲ ಸವರಿದ, ಚಿನ್ನಾರಿ ಹೊಟ್ಟೆಗೆ ಯಾರೋ ಜೋರಾಗಿ ಒದ್ದ ಗಾಯ ಇತ್ತು. ಅರಬಡಿಸಿ ಅತಗೊಂತ ಗುಡಿಸಲ ಬಾಗಿಲು ತೆಗೆದ ತಾನು ಮಲಗೋ ಮಂಚದ ಕೆಳಗ ಧಣೇರ ಥಳಥಳ ಹೊಳಿಯೋ ಬಂಗಾರದ ಚೈನು ಬಿದ್ದಿತ್ತು. ಕೌದಿ ಕೆಳಗ ಇದ್ದ ಒಡೆದ ಬಳಿ ಚೂರು ನೋಡಿ ಎನೋ ನೆನಪಾಗಿ ವಾಂತಿ ಬಂದಂಗಾತು. ಸೀದಾ ಸಲಿಕಿ ಗುದ್ದಲಿ ತಗೊಂಡು ತಗ್ಗು ತೋಡಿ ತಾನು ಪ್ರೀತಿಯಿಂದ ಸಾಕಿದ ಚಿನ್ನಾರಿಯನ್ನು ಹೂಳಿಟ್ಟು ಮಣ್ಣು ಮಾಡಿದ. ಏನೋ ನೆನಪಾದಂಗಾಗಿ ಅದರ ಪಕ್ಕದಾಗ ಇನ್ನೊಂದು ದೊಡ್ಡ ಕುಣಿ ತೋಡಿದ. ತಲಿ ತುಂಬಾ ಏನೋ ಆಲೋಚನೆಗಳು. ಮೈಯೆಲ್ಲ ಬೆವರು. ನಡದಾಗ ಕಟ್ಟಿಕೊಂಡಿದ್ದ ಪಾಣಿ ನಾಯಿಕೂಡಾ ಕುಣಿ ಸೇರಿತ್ತು.ನದಿಯಾಗ ಕೈಕಾಲು ತೊಳಕೊಂಡು ಧಣ್ಯಾರ ಮನಿದಾರಿ ಹಿಡಿದ. ಧಣ್ಯಾರು ನಾಗಿ, ಚಿನ್ನಾರಿ ಬೆನ್ನು ಹತ್ತಿ ಬಂದಂಗಾತು. ಕುಣಿ ತೊಡೋ ಮುಂದ ಕೈಯಲ್ಲಿದ್ದ ಸಲಿಕಿ ಕೈಯಾಗಿಂದ ಹೆಗಲೇರಿತ್ತು. ದಾರ್‍ಯಾಗ ಭೆಟ್ಟಿ ಆದ ದುರುಗಪ್ಪ ಯಾಕಲೇ ಕರಿಯ ಸಲಿಕಿ ತಗಂಡು ಧಣ್ಯಾರ ಮನಿಗೆ ವಂಟಿಯಲೇ ಎಂದ. ಅದನ್ನೇನು ಲೆಕ್ಕಿಸದೇ, ಏನೂ ಉತ್ತರ ಕೊಡದೇ ಧಣೇರ ಮನೆಕಡೆ ದೌಡಾಯಿಸಿದ. ಸಿಟ್ಟಿಗೆದ್ದ ಸೂರ್ಯ ನೆತ್ತಿಮ್ಯಾಲ ಧಗ, ಧಗ ಉರೀತಿದ್ದ, ಮೈಯೆಲ್ಲ ಕಿತ್ತಿ ಬಂದ ಬೆವರು ಬೆನ್ನಿಂದ ಕುಂಡಿಗುಂಟ ತೊಡಿ ಮ್ಯಾಲ ಇಳಿತಿದ್ದುದರ ಖಬರ ಇಲ್ದ ಕರಿಯ ಧಣಿ ಮನಿ ಹಾದಿ ಹಿಡಿದ.
Posted by siddu yapalaparavi at
2:28 AM

0 comments: