'ಬಾತ್'ರೂಮಾಯಣಂ: 'ತಿಂಡಿ' ಪುರಾಣಂ

>> Friday, April 16, 2010


ನಾವು ಪಡೆದುಕೊಂಡ ಅನುಭವಗಳಲ್ಲಿ ಮಹತ್ವಪೂರ್ಣ ಸಂಗತಿಗಳನ್ನು ಮಾತ್ರ ಹೇಳುತ್ತೇವೆ. ವೈಯಕ್ತಿಕವಾಗಿ ನಮ್ಮನ್ನು ಬದುಕಿನಲ್ಲಿ ಕಾಡಿದ ಸಣ್ಣಪುಟ್ಟ ವಿಷಯಗಳನ್ನು ನಾವು ಪ್ರಸ್ತಾಪಿಸುವುದು ವಿರಳ. ಆದರೆ ನನಗೆ ಇಂತಹ ಸಣ್ಣ ವಿಚಾರಗಳನ್ನು ಅನಿವಾರ್ಯವಾಗಿ ಪ್ರಸ್ತಾಪಿಸಬೇಕು ಎನಿಸುತ್ತದೆ. ಕೆಲ ದಿನಗಳ ಹಿಂದೆ ಮಠಾಧೀಶರೊಬ್ಬರು ಲೇಖನದಲ್ಲಿ ವಿದೇಶದಲ್ಲಿ ತಮ್ಮೊಂದಿಗೆ ತೆರಳಿದ್ದ ಸಹ ಪ್ರಯಾಣಿಕರ ಅನುಭವಗಳನ್ನು ವಿವರಿಸಿದ್ದರು. ಆದರೆ ನಾನು ನನ್ನ ಅನುಭವಗಳನ್ನು , ನನಗೆ ಉಂಟಾದ ಇರುಸು -ಮುರುಸುಗಳನ್ನು ಹಂಚಿಕೊಳ್ಳುತ್ತೇನೆ. ನನ್ನ ವಿದೇಶಾನುಭವದಲ್ಲಿ ವಿಮಾನಯಾನದಂತೆ, ನನ್ನನ್ನು ಕಾಡಿದ ಬಾತ್ ರೂಮ್‌ಗಳ ಬಗ್ಗೆ ಬರೆಯದಿದ್ದರೆ ಹೇಗೆ?
ನಾನು ಈ ಹಿಂದೆ ಅನೇಕ ಬಾರಿ ಪ್ರಸ್ತಾಪಿಸಿದ್ದೇನೆ. ಗ್ರಾಮೀಣ ಪ್ರದೇಶದಿಂದ ಬಂದ ನನಗೆ ಆಚಾರ-ವಿಚಾರ, ನಡೆ-ನುಡಿಯಲ್ಲಿ ತೀವ್ರವಾದ ದೇಸಿತನವಿದೆ. ನಾಗರಿಕ ಸಂಸ್ಕೃತಿಯ 'ಸಭ್ಯರು' ರೂಢಿಸಿಕೊಂಡಿರುವ ನಗರೀಕರಣದ ಮಡಿವಂತಿಕೆಯನ್ನು ನಾನು ಒತ್ತಾಯ ಪೂರ್ವಕವಾಗಿ ಪಾಲಿಸುವುದಿಲ್ಲ. ಇದನ್ನು 'ಕೆಲವರು' ಅನಾಗರಿಕತೆ ಎಂದು ವಾಖ್ಯಾನಿಸುವದುಂಟು. ಹಾಗಂತ ಬೇರೆಯವರನ್ನು ಮೆಚ್ಚಿಸಲೆಂದು ನಮಗೆ ಸರಿ ಹೊಂದದ, ಸಾಧ್ಯವಾಗದ ಆಚರಣೆಗಳನ್ನು ರೂಢಿಸಿಕೊಳ್ಳುವುದು ಅಸಮಂಜಸ ಎಂಬುದೇ ನನ್ನ ಅನಿಸಿಕೆ.ಅನಗತ್ಯ ಇಂಗ್ಲಿಷ್‌ನಲ್ಲಿ ಮಾತನಾಡುವುದು , ಅದಕ್ಕೆ ಸರಿ ಹೊಂದುವ ಬಾಡಿ ಲ್ಯಾಂಗ್ವೇಜ್ ಅಭಿವ್ಯಕ್ತಿಸುವುದು ನನಗೆ ಒಮ್ಮೊಮ್ಮೆ ಕಿರಿಕಿರಿ ಎನಿಸುತ್ತದೆ. ಆದರೆ ಇಂತಹ ಅನೇಕ ಕಿರಿಕಿರಿಗಳನ್ನು ಬದಿಗಿರಿಸಿ ನಾವು ಹೊರದೇಶಗಳಲ್ಲಿ ಅವರಿಗೆ ಸರಿಹೊಂದುವಂತೆ ನಡೆದುಕೊಳ್ಳಬೇಕು. ನಮಗೆ ಸರಿ ಅನ್ನಿಸದಿದ್ದರೂ ಅಲ್ಲಿಯವರಿಗೊಸ್ಕರವಾದರೂ ಅವುಗಳನ್ನು ಪಾಲಿಸುವದು ಅನಿವಾರ್ಯವೆನಿಸಿತು.
ಅದರಲ್ಲಿ ಬಾತ್ ರೂಮ್ ಹಾಗೂ ಆಹಾರ ಸಂಸ್ಕೃತಿ ನನಗೆ ಹೆಚ್ಚು ಅಸಹನೀಯವೆನಿಸಿದವು. ವಿಷಾಲವಾದ ಹಳ್ಳ,ಕೆರೆ, ಭಾವಿ, ಕಾಲುವೆಗಳಲ್ಲಿ ಸ್ವಚ್ಛಂದವಾಗಿ ಉರುಳಾಡಿ ಈಜುತ್ತಾ ಕಾಲ ಕಳೆದ ನಮ್ಮಂತವರಿಗೆ ವಿದೇಶದಲ್ಲಿನ ಬಾತ್ ರೂಮ್‌ಗಳು ಉಸಿರುಗಟ್ಟಿಸುತ್ತವೆ. ನಾನು ಮೋರಿಯೇ ಇಲ್ಲದ ಈ ಬಾತ್ ರೂಮ್ ಗಳನ್ನು ಕಂಡು ಗಾಭರಿಯಾದೆ. ಬಾತ್ ರೂಮ್ ಗೆ ಹೋದಾಗಲೆಲ್ಲ ಕಾಲು ತೊಳೆದುಕೊಳ್ಳುವ ಹವ್ಯಾಸವಿರುವವರಿಗೆ ಪ್ರತಿ ಸಲ ಟಬ್ ನಲ್ಲಿ ಇಳಿಯುವುದು ಸಹ್ಯವೆನಿಸುವುದಿಲ್ಲ. ಆಧುನಿಕ ವಿನ್ಯಾಸಿತ ವಾಕ್-ಇನ್-ಶಾವರ್ ಗಳ ಸ್ನಾನ ಉಸಿರುಗಟ್ಟಿಸುವಂತೆ ಭಾಸವಾಗುತ್ತದೆ. ಇಂದಿನ ಹೈ-ಫೈ ಯುವಕರು ಇವುಗಳಿಗೆಲ್ಲ ಕಷ್ಟ ಪಟ್ಟು ಹೊಂದಿಕೊಂಡು ಅನುಭವಿಸುತ್ತಾರೆ. ಇಲ್ಲಿನ ಹೋಟೆಲ್ ಹಾಗೂ ಮನೆಗಳಲ್ಲಿ ಅಳವಡಿಸಿರುವ ಎಚ್ಚರಿಕೆ ಗಂಟೆಗಳು ನಮ್ಮನ್ನು ಸದಾ ಕಾಡುತ್ತವೆ. ತಿರುಗಾಡಿದರೆ ನಲುಗಿದಂತೆ ಭಾಸವಾಗುವ ಮನೆಗಳ ವಿನ್ಯಾಸ, ಕೆಳಗೆ ಹಾಸಿರುವ ಮೃದು ಹಾಸು ನಮ್ಮ ಒರಟುತನವನ್ನು ಕಡಿಮೆಯಾಗಿಸುತ್ತದೆ. ಪಕ್ಕದ ಮನೆಯವರು ಬಾಗಿಲು ಹಾಕಿದರೆ ನಮ್ಮ ಮನೆಯ ಬಾಗಿಲು ಹಾಕಿದ ಹಾಗೆ ಕೇಳಿಸುತ್ತಿತ್ತು. ಅಕ್ಕ ಪಕ್ಕದವರು ಇದ್ದಾರೆ ಎಂಬುದು ಕೇವಲ ಅವರು ಬಳಸುವ ವಸ್ತುಗಳ ಸಪ್ಪಳದಿಂದ ತಿಳಿಯುತ್ತಿತ್ತು. ಸದಾ ಶಬ್ದ ಮಾಲಿನ್ಯದಲ್ಲಿರುವ ನಮಗೆ ಇದೆಲ್ಲ ಹೊಸ ಅನುಭವ. ನಮ್ಮ ಬಂಧುಗಳು, ಸ್ನೆಹಿತರು ಎಷ್ಟೇ ಸ್ವಾತಂತ್ರ್ಯ ನೀಡಿದರು ಇಲ್ಲಿನ ಪರಿಸರವನ್ನು ಗಮನಿಸಿ ನಾವೇ ನಮ್ಮಲ್ಲಿ ಬದಲಾವಣೆಗಳನ್ನು ರೂಢಿಸಿಕೊಳ್ಳುತ್ತೇವೆ. ನಾನು ಕೆಲವು ಸಣ್ಣ ಪುಟ್ಟ ಬದಲಾವಣೆಗೆ ಹೊಂದಿಕೊಂಡೆ. ಆದರೆ ಇಲ್ಲಿನ ಬಾತ್ ರೂಮ್ ಹಾಗೂ ಆಹಾರ ಸಂಸ್ಕೃತಿಗೆ ಹೊಂದಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಟಬ್ ಅಥವಾ ವಾಕ್-ಇನ್ ಶಾವರ್ ನಲ್ಲಿ ಸ್ನಾನ ಮಾಡುವಾಗ ನೀರನ್ನು ಬಾತ್ ರೂಮ್ ನಲ್ಲಿ ಸಿಂಪಡಿಸದ ಹಾಗೆ ಎಚ್ಚರವಹಿಸಬೇಕು. ಶಾವರ್ ಪ್ರದೇಶದಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಲ್ಲಿದರೆ ಕೆಳಗೆ ಹಾಸಿದ ಕಾರ್ಪೆಟ್ ಗಲೀಜಾಗುತ್ತದೆ. ಅಲ್ಲದೆ ಕೆಳಗೆ ಬಿದ್ದ ನೀರು ಹರಿದು ಹೋಗಲು ಮೋರಿಗಳೆ ಇರುವದಿಲ್ಲವಲ್ಲ? ಹೀಗಾಗಿ ಅತಿಯಾಗಿ ನೀರು ಸೋರಿದರೆ ಇಲ್ಲಿನ ಹೋಟೆಲ್ ಗಳಲ್ಲಿ ಅಪಾಯದ ಗಂಟೆ ಬಾರಿಸಿ ಗೊಂದಲವುಂಟಾಗುತ್ತದೆ. ಈ ಅಪಾಯಯವನ್ನು ತಪ್ಪಿಸಲೆಂದೇ ನೆಲದ ಮೇಲೆ ಹಾಕಿರುವ ಕಾರ್ಪೆಟ್‌ಗಳ ಮೇಲೆ ಮತ್ತೆ ಟಾವೆಲ್ ಬೆಡ್ ಶಿಟ್ ಹಾಕಿ ನೀರು ಇಂಗುವಂತೆ ಎಚ್ಚರವಹಿಸುತ್ತಾರೆ. ಹೊರ ದೇಶದ ಸ್ನೇಹಿತರು ಅತಿಥಿಗಳು ಬಂದರೆ ಅವರಿಗೆ ಸಂಕೋಚ ವಾಗಬಾರದೆಂಬ ಕಾರಣಕ್ಕೆ ಅವರು ತೆಗೆದುಕೊಳ್ಳುವ ಜಾಗೃತಿಯ ಔದಾರ್ಯ ನಮಗೆ ಅಚ್ಚರಿ ಅನಿಸುತ್ತದೆ. ಹೊಸ ಬಗೆಯ ವಿನ್ಯಾಸಗಳು ನಮಗೆ ಅಪರಿಚಿತವೆನಿಸುವದರಿಂದ ಅಲ್ಲಿದ್ದವರನ್ನು ಕೇಳಿ ಬಳಸುವದು ಸೂಕ್ತ ಎನಿಸುತ್ತಿತ್ತು. ಅವುಗಳನ್ನು ಬಳಸುವ ವಿಧಾನವನ್ನು ನಾನು ನಿಸ್ಸಂಕೋಚವಾಗಿ ಕೇಳುತ್ತಿದ್ದೆ. ನನಗಾಗುವ ಆತಂಕವನ್ನು ತಪ್ಪಿಸಲು ನನ್ನ ಸೊದರ ಡಾ ನಾಗರಾಜ ಕೆಲವು ತಾತ್ಕಾಲಿಕ ಅನುಕೂಲಗಳನ್ನು ಸ್ಟೃಸಿದ್ದ.
ವೇಲ್ಸ್ ದೇಶದಲ್ಲಿ ನೆಲೆಸಿರುವ ಅನಿವಾಸಿ ಸ್ನೇಹಿತ ಡಾ ರವಿ ಸಾಣೆಕೊಪ್ಪ ಅವರ ಮನೆ ಸುಂದರವಾಗಿದೆ. ಮನೆ ಕಟ್ಟುವ ಹಾಗೂ ಅದನ್ನು ಬಳಸುವಲ್ಲಿ ಅವರಿಗಿರುವ ಅಭಿರುಚಿ ಅನನ್ಯವೆನಿಸಿತು. ಖ್ಯಾತ ವ್ಯಂಗ ಚಿತ್ರ ಲೇಖಕ ಡಾ. ಆರ್ ಕೆ ಲಕ್ಷ್ಮಣ ಬರೆದ ಆಸ್ಟ್ರೇಲಿಯಾ ಪ್ರವಾಸ ಕಥನದಲ್ಲಿನ ಮನೆಯ ವಿವರಣೆ ನನಗಿಲ್ಲಿ ನೆನಪಾತು. ಡಾ ರವಿ ದಂಪತಿಗಳು ತಮ್ಮ ಮನೆಯನ್ನು ಪ್ರೀತಿಂದ ಪರಿಚಯಿಸಿದರು. ಹಾಗೆಯೇ ನಮ್ಮ ವಾಸ್ತವ್ಯದಲ್ಲಿ ಬಳಸಬಹುದಾದ ಬಾತ್ ರೂಮ್ ಪರಿಚುಸಿದಾಗ ನನ್ನ ಅಸಹಾಯಕತೆಯನ್ನು ತಮಾಷೆಯಿಂದ ವಿವರಿಸಿದೆ. 'ಡೊಂಟ್ ವರಿ ನಿಮಗೆ ಸರಿ ಅನಿಸಿದಂಗ ಬಳಸಿರಿ ನಾವು ನಂತರ ಕ್ಲೀನ್ ಮಾಡಿಕೊಳ್ಳುತ್ತೇವೆ'. ಎಂದ ಅವರ ಪ್ರೀತಿ ನ್ನನ್ನು ಬೆರಗುಗೊಳಿಸಿತು.
ಭಾರತೀಯ ಸಿನೆಮಾಗಳಲ್ಲಿ ತೋರಿಸುವ ಬಾತ್ ರೂಮ್ ಸೀನ್‌ಗಳು, ರೊಮ್ಯಾಂಟಿಕ್ ಹಾಡುಗಳು ಇಲ್ಲಿನ ಬಾತ್ ರೂಮ್ ಗಳಲ್ಲಿ ಅಸಾಧ್ಯವೆನಿಸಿತು. ಭಾರತೀಯರ ಬಾತ್ ರೂಮ್ ರೋಮ್ಯಾನ್ಸ್ ಇಲ್ಲಿ ನೆನಪಾಗಿ ಒಳಗೊಳಗೆ ತಮಾಷೆ ಎನಿಸಿತು. ಅಯ್ಯೋ ಪಾಪ ! ವಿದೇಶದಲ್ಲಿ 'ಹನಿಮೂನ್ 'ಗೆ ಬಂದವರು ಬಾತ್ ರೂಮ್ ರೋಮ್ಯಾನ್ಸ್ ಕಲ್ಪಿಸಿಕೊಂಡಿದ್ದರೆ ನಿರಾಷೆಯಾಗುವದನ್ನು ಸ್ನೇಹಿತರಿಗೆ ರಸವತ್ತಾಗಿ ಹೇಳಿದೆ. ಓ! ಯು ಆರ್ ರೈಟ್ ಇದನ್ನು ಊಹಿಸಿಯೇ ಇರಲಿಲ್ಲ. ಯು ಆರ್ ಎನ್ ಇಂಟರಸ್ಟಿಂಗ್ ಇಮ್ಯಾಜಿನರ್ ಎಂಬ ಸರ್ಟಿಫಿಕೆಟ್ ನೀಡಿದರು. ಇರಲಿಬಿಡಿ ವಿದೇಶ ಪ್ರವಾಸ ಮಾಡುವ ನನ್ನಂತಹ ಹಳ್ಳಿ ಹೈದರಿಗೆ ಆಗುವ ಅನುಭವಗಳ ಮಾಹಿತಿಗಾಗಿ ಇಷ್ಟೆಲ್ಲ ವಿವರಿಸಿದೆ.
ಆಹಾರ ಸಂಸ್ಕೃತಿ: ಭಾರತೀಯರು ಆಹಾರ ಸಂಸ್ಕೃತಿಗೆ ಮಹತ್ವ ನೀಡುವ ಭೋಜನ ಪ್ರಿಯರು. ಇಂಡಿಯಾ ದೇಶದ ಪ್ರತಿ ಕಿಲೋ ಮೀಟರ್ ಅಂತರದಲ್ಲಿ ಆಹಾರ ವೈವಿಧ್ಯತೆಯಿಂದ ಊಟದ ಸವಿ ಅನುಭವಿಸುತ್ತೇವೆ. ಆದರೆ ಯುರೋಪ್‌ನುದ್ದಕ್ಕೂ ಅಲೆದರು ಒಂದೇ ರುಚಿ, ಅದೇ ಏಕತಾನತೆ. ಬಿಫ್ ಚಿಸ್ ವಾಸನೆಯನ್ನು ಎದುರಿಸಿ ಉಪ್ಪು ,ಖಾರ ರುಚಿ ಇಲ್ಲದ ಊಟ ಮಾಡಲು ಸಂಕಟವಾಗುತ್ತದೆ. ಭಾರತೀಯ ರೆಸ್ಟೋರಾಗಳನ್ನು ಹುಡುಕಿ ಹೊಟ್ಟೆ ತುಂಬ ತಿನಬೇಕೆನಿಸುತ್ತದೆ. ಮದುವೆ ಇತರ ಸಮಾರಂಭಗಳಲ್ಲಿ ಆಧುನಿಕ ಶೈಲಿಗಳಲ್ಲಿ ಊಟ ವೇಸ್ಟ್ ಮಾಡುವ ಶ್ರೀಮಂತರು, ಅದನ್ನು ತಿಪ್ಪೆಗೆಸೆದಾಗ ಕಚ್ಚಾಡಿ ತಿನ್ನುವ ಹಸಿದವರ ನೆನಪು ನನ್ನನ್ನಿಲ್ಲಿ ಕಾಡಿತು. ಆಹಾರವನ್ನು ಕಲ್ಯಾಣದ ಶರಣರು ಪ್ರಸಾದವೆಂದು ಕರೆದು ಪ್ರತಿ ಅಗುಳಿಗೂ ಮಹತ್ವ ನೀಡಿದ್ದಾರೆ. ಆದರೆ ಅದರ ಮಹತ್ವವನ್ನರಿಯದ ನಾವು ಬೇಡವಾದದ್ದೆನ್ನೆಲ್ಲ ತಟ್ಟೆಯಲ್ಲಿ ಹಾಕಿಸಿಕೊಂಡು ಹಾಗೆಯೇ ಬಿಡುತ್ತೇವೆ. ಈ ನಮ್ಮ ದುರಹಂಕಾರಿ ಮನೋಧರ್ಮಕ್ಕೆ ವಿದೇಶದಲ್ಲಿ ತಕ್ಕ ಶಿಕ್ಷೆಯಾಗುತ್ತದೆ. ವಿದೇಶಿ ಆಹಾರ ರುಚಿಸದೇ, ದೇಶಿಯ ಆಹಾರ ಸಿಗದೇ ಉಪವಾಸ ಬೀಳುವ ಶ್ರೀಮಂತ ನಿರ್ಗಕತಿಕರಾಗುತ್ತೇವೆ. ನಮ್ಮ ದೇಶದ ಆಹಾರ, ಅದರ ರುಚಿ, ಅದಕ್ಕಿರುವ ಬೆಲೆ ವಿದೇಶಗಳಲ್ಲಿ ನಮಗೆ ಅರ್ಥವಾಗುತ್ತದೆ. ಕಾಯಕ, ದಾಸೋಹ, ಪ್ರಸಾದ ಎಂದು ವೇದಿಕೆಯಲ್ಲಿ ಭಾಷಣ ಮಾಡುವ ನಾವು ತಟ್ಟೆಯಲ್ಲಿ ಹಾಕಿದ ಆಹಾರ ಕೆಡಿಸಿ ಅಹಂಕಾರಿಗಳಾಗುತ್ತೇವೆ. ಈ ರೀತಿಯ ತತ್ವಗಳನ್ನು ಎಂದೂ ಹೇಳದ ವಿದೇಶಿಗರು ಒಂದಿಷ್ಟು ಕೆಡಿಸದಂತೆ ಆಹಾರ ಸೇವನೆಯನ್ನು ಎಂಜಾಯ್ ಮಾಡುತ್ತಾರೆ. ತಮಗೆ ಬೇಡ ವೆನಿಸಿದ ಆಹಾರವನ್ನು ಹಾಕಿಸಿಕೊಳ್ಳಲು ನೇರವಾಗಿ ನಿರಾಕರಿಸುತ್ತಾರೆ. ಊಟಕ್ಕೆ ಒತ್ತಾಸುವ ನಮ್ಮ ಪದ್ಧತಿ ಅವರಿಗೆ ಅಚ್ಚರಿ ಅನಿಸುತ್ತದೆ. ವಿದೇಶಿ ಊಟವನ್ನು ಮುಖ ಕಿವುಚಿಕೊಂಡು ತಿನ್ನುವ ನಮ್ಮ ದೈನೇಸಿ ಸ್ಥಿತಿಗೆ ಅನುಕಂಪ ಪಡುತ್ತಾರೆ. ನಾವು ಸೇವಿಸುವ ಆಹಾರ, ಬಳಸುವ ವಸ್ತುಗಳು ಭಿನ್ನ ಸಂಸ್ಕೃತಿಯಾಗಿ ನನಗೆ ಇಲ್ಲಿ ಪ್ರತಿಕ್ಷಣ ಕಾಡುತ್ತಲೇ ಇದ್ದವು.

0 comments: