ಪ್ರವಾಸ ಕಥನ:: ಮೆಡಿಕಲ್ ಕಾಲೇಜುಗಳ ಆಳ ಅಧ್ಯ ವಿಸ್ತಾರ

>> Saturday, April 17, 2010

ಆರೋಗ್ಯ ಇಲಾಖೆಗೆ ಸಂಬಂಧಿಸಿದ ಆಸ್ಪತ್ರೆ ಹಾಗೂ ವೈದ್ಯಕೀಯ ಸೇವೆಯ ಕುರಿತು ಕಳೆದವಾರ ಸುದೀರ್ಘವಾಗಿ ಚರ್ಚಿಸಿದ್ಧೆ. ಆಕ್ಸಫರ್ಡ್‌ನ ಕಲಿಕಾ ವಿಧಾನದ ಬಗೆಗಿನ ಚರ್ಚೆಯಂತೆ, ವೈದ್ಯಕೀಯ ಶಿಕ್ಷಣ ಕ್ಷೇತ್ರದ ಕಲಿಕಾ ವಿಧನದ ಕುರಿತು ತಿಳಿಯುವ ನನ್ನ ಉತ್ಸಾಹಕ್ಕೆ ಇಲ್ಲಿನ ವೈದ್ಯ ಪ್ರಾಧ್ಯಾಪಕರು ಉತ್ಸಾಹದಿಂದ ನೆರವಾದರು. ಆದರೆ ಆಕ್ಸಫರ್ಡ್‌ನಲ್ಲಿ ಗ್ರಹಿಸಿಕೊಂಡಷ್ಟು ಸುಲಭವಾಗಿ ನಾನಿದನ್ನು ಅರಿತುಕೊಳ್ಳಲು ಕಷ್ಟವಾಯಿತು. ತುಂಬಾ ಕುತೂಹಲದಿಂದ ಶೃದ್ಧೆಯಿಂದ ಕೇಳಿಸಿಕೊಂಡು ಈಗ ಅನೇಕ ವೈದ್ಯರುಗಳ ಪ್ರೀತಿಯ ಒತ್ತಾಸೆಗಾಗಿ ತಮ್ಮೆದುರು ನಿವೇದಿಸುತ್ತಲಿದ್ದೇನೆ.
ನi ದೇಶದಲ್ಲಿ ಉನ್ನತ ವೈದ್ಯಕೀಯ ಪದವಿ ಪಡೆದು, ಇಂಗ್ಲೆಂಡ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ನೂರಾರು ವೈದ್ಯರುಗಳು ಪರಿಣಿತರೆನಿಸಿಕೊಂಡು ಕೀರ್ತಿ ಸಂಪಾದಿಸಿದ್ದಾರೆ.ಆದರೆ ಆರಂಭದ ದಿನಗಳಲ್ಲಿ ಅವರು ಅನುಭವಿಸಿದ ತೊಂದರೆಯನ್ನು ಅಷ್ಟೇ ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತಾರೆ. ಕಳೆದವಾರ ನಾನು ಪ್ರಸ್ತಾಪಿಸಿದಂತೆ, ಯುರೋಪನಿಂದ ಇಂಡಿಯಾಕ್ಕೆ ಕಾಲಿಟ್ಟ "ಅಲೋಪತಿ" ನಮ್ಮ ದೇಶದ ನೂರಾರು ಕಾಲೇಜುಗಳ ಮೂಲಕ ಸದೃಢವಾಗಿ ಬೆಳೆದು ನಿಂತಿದೆ. ಭಾರತೀಯ ವೈದ್ಯಕೀಯ ಶಿಕ್ಷಣವೆಂದರೆ, ಶಿಕ್ಷಣ ಸಂಸ್ಥೆಗಳಿಗೆ ಕಾಮಧೇನು ಕಲ್ಪವೃಕ್ಷ ಕೋಟಿಗಟ್ಟಲೆ ವಹಿವಾಟು ತಂದು ಕೊಡುವ ಶಿಕ್ಷಣೋದ್ಯಮ. ಆದರೆ ನಮ್ಮ ದೇಶದಲ್ಲಿನ ವೈದ್ಯಕೀಯ ಕಾಲೇಜುಗಳು ತಮ್ಮ ಹಿರಿಮೆಯನ್ನು ಭೌತಿಕ ಸೌಂದರ್ಯದ ಮೂಲಕ ಹೆಚ್ಚಿಸಿಕೊಂಡಿದೆ.ಭವ್ಯ ಕಟ್ಟಡಗಳು, ಸ್ಟಾರ್ ಸಂಸ್ಕೃತಿಯ ಸುಸಜ್ಜಿತ ಆಸ್ಪತ್ರೆಗಳು, ಎನ್ .ಆರ್, ಎ. ಖೋಟಾದಡಿಯಲ್ಲಿ ದಾಖಲಿಸುವ ವಿದೇಶಿ ವಿದ್ಯಾರ್ಥಿಗಳ ಅಬ್ಬರದ ನಡುವೆ ಕಲಿಯುವ ಕಲಿಸುವ ವಿಧಾನ ಸೊರಗಿ ಸುಣ್ಣಾಗಿರುವುದನ್ನು ಸಂಸ್ಥೆಗಳು ಗಮನಿಸುತ್ತಿಲ್ಲ.
ವೈದ್ಯಕೀಯ ಕಾಲೆಜುಗಳಲ್ಲಿನ ಪ್ರಾಧ್ಯಾಪಕರುಗಳು, ಕಲಿಸುವಿಕೆಗಿಂತ, ವೃತ್ತಿಗೆ ಮನ್ನಣೆ ನೀಡುವುದರಿಂದ ಉತ್ತಮ ಶಿಕ್ಷಕರಾಗಿ ರೂಪಗೊಳ್ಳುತ್ತಿಲ್ಲ ಎಂಬ ಆರೋಪವಿದೆ. ಇಡೀ ರಾಜ್ಯದಲ್ಲಿ ಹುಡುಕಿದರೆ ಹತ್ತಾರು ಜನ ಬೆರಳೆಣಿಕೆಯಷ್ಷು ಉತ್ತಮ ವೈದ್ಯಕೀಯ ಶಿಕ್ಷಕರು ಸಿಗುತ್ತಾರೆ. ವೃತ್ತಿಪರ ಕೋರ್ಸುಗಳ ಕಾಲೇಜುಗಳಲ್ಲಿ ಶಿಕ್ಷಕರಾಗಿ ದುಡಿಯುವದೆಂದರೆ ಕನಿಷ್ಟ ಸೇವೆ ಎಂದು ಭಾವಿಸಿ, ಅದನ್ನು ಮೊಟಕುಗೊಳಿಸಿ ಬೇಗ ಪ್ರ್ಯಾಕ್ಟೀಸ್ ಪ್ರಾರಂಭಿಸಿ ಖ್ಯಾತ ವೈದ್ಯರೆನಿಸಿಕೊಳ್ಳುತ್ತಾರೆ. ಪ್ರ್ಯಾಕ್ಟೀಸ್‌ಗೆ ಮಹತ್ವ ನೀಡುವುದರಿಂದ ಬೇಗ ಹೆಸರು, ಖ್ಯಾತಿ ಯೊಂದಿಗೆ ಹಣ ಗಳಿಸಬಹುದೆಂಬ ಉತ್ಸಾಹ. ಈ ರೀತಿಯ ಉತ್ಸಾಹದಿಂದಾಗಿ ರಾಜ್ಯದ ಬಹುಪಾಲು ವೈದ್ಯಕೀಯ ಹಾಗೂ ಇಂಜನಿಯರಿಂಗ್ ಕಾಲೇಜುಗಳಲ್ಲಿ ಶ್ರೇಷ್ಠರೆನಿಸುವ ಶಿಕ್ಷಕರ ಕೊರತೆ ದಟ್ಟವಾಗಿದೆ "ಪ್ಯ್ರಾಕ್ಟೀಸ್" ಕ್ಷೇತ್ರದಲ್ಲಿ ವಿಫಲರಾದವರು ಮಾತ್ರ ಶಿಕ್ಷಕರಾಗುತ್ತಾರೆ ಎಂಬ ಆರೋಪದ ಸತ್ಯಾಸತ್ಯತೆಯನ್ನು ಆಯಾ ಕ್ಷೇತ್ರದಲ್ಲಿರುವವರೇ ಹೇಳಬೇಕು. ಇದು ಹೀಗೆ ಎಂದು ನಿರ್ಣಯ ಕೊಡುವುದು ಅಸಮಂಜಸವೆಂದು ನಾನು ಭಾವಿಸುತ್ತೇನೆ.
ಖ್ಯಾತ ವೈದ್ಯ ವಿeನಿ, ವೈದ್ಯ ಶಿಕ್ಷಕ ಡಾ. ಸ. ಜ ನಾಗಲೋಟಿಮಠ ಅವರನ್ನು ಈ ಹಿನ್ನೆಲೆಯಲ್ಲಿ ಸ್ಮರಿಸಿಕೊಳ್ಳುವುದು ಅಗತ್ಯವೆನಿಸುತ್ತದೆ. ಅವರು ತಮ್ಮ ಕೊನೆ ಉಸಿರಿರುವವರೆಗೆ ಕಲಿಯುತ್ತ ,ಕಲಿಸುತ್ತ ಪ್ರಾಣಬಿಟ್ಟ ವೈದ್ಯಕೀಯ ಸಂತರಾದರು. ವೈದ್ಯಕೀಯ ಶಾಸ್ತ್ರದ ಗಾಳಿ ಗಂಧವಿಲ್ಲದ ನಮ್ಮಂತವರಿಗೂ ತಿಳಿಯುವ ಹಾಗೆ ಸರಳ ಇಂಗ್ಲಿಷ್ ಹಾಗೂ ಕನ್ನಡ ಭಾಷೆಯಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ರೋಗ ಶಾಸ್ತ್ರವನ್ನು ವಿವರಿಸುತ್ತಿದ್ದರು , ವೃತ್ತಿಯಲ್ಲಿ ಬಂದ ಎಲ್ಲ ಉತ್ತಮ ಅವಕಾಶಗಳನ್ನು ನಿರಾಕರಿಸಿ , ಜನರ ನಿಷ್ಠುರ ಕಟ್ಟಿಕೊಂಡು ನಿಂತಲ್ಲೆ ನಿಲ್ಲದೆ ನಾಡಿನಲ್ಲೆಲ್ಲ ಸಂಚರಿಸಿ ನಿಜ ಜಂಗಮರಾದರು. ಹಣೆಮೇಲಿನ ಭಸ್ಮ, ಸರಳ ಉಡುಗೆ ,ನಿಷ್ಠುರ ಮಾತುಗಳು, ದಟ್ಟ ಪ್ರಾಮಾಣಿಕತೆಯ ಇತಿಹಾಸವನ್ನು ಅವರು ತಮ್ಮ ಆತ್ಮ ಚರಿತ್ರೆ 'ಬಿಚ್ಚಿಟ್ಟ ಜೋಳಿಗೆ'ಯಲ್ಲಿ ತೆರೆದಿಟ್ಟಿದ್ದಾರೆ. ವಿವಿಧ ವೇದಿಕೆಗಳಲ್ಲಿ ನಾನು ಅವರೊಂದಿಗೆ ಕಾಲಕಳೆದದ್ದು ಅವಿಸ್ಮರಣೀಯ.
"ಆರೋಗ್ಯ -ಶಿಕ್ಷಣದ ಮಹತ್ವವನ್ನು ,ವೈದ್ಯಕೀಯ ಕ್ಷೇತ್ರಕ್ಕಿರಬೇಕಾದ ಪ್ರಾಮಾಣಿಕತೆಯನ್ನು ನೀವು ನೋಡಬೇಕೆಂದ್ರ ಒಮ್ಮೆ ಇಂಗ್ಲೆಂಡ್‌ಗೆ ಹೋಗ್ರಿ, ಅಲ್ಲಿನ ಡಾಕ್ಟರುಗಳನ್ನು ನೋಡ್ರಿ ಅವರ ಸೇವಾ ಮನೋಭಾವ, ವೃತ್ತಿನಿಷ್ಠೆ ನೋಡಿದ್ರೆ ನಿಮಗೆ ಡಾಕ್ಟರುಗಳ ಬಗ್ಗೆ ಗೌರವ ಬರ್‍ತ್ಯತಿ" ಎಂದಿದ್ದ ಅವರ ದೇಸಿಯ ಮಾತುಗಳು ನನಗೆ ಇಂಗ್ಲೆಂಡ್‌ನಲ್ಲಿ ಮತ್ತೆ ನೆನಪಾದವು, ದಢೂತಿ ದೇಹದ-ಗಂಭೀರ ಮನಸ್ಥಿತಿಯ ಇಂಗ್ಲೆಂಡ್‌ನ ಪ್ರಾಧ್ಯಾಪಕರುಗಳು ಮಹಾಮೌನಿಗಳು. ಆಪ್ಲೈಡ್ ವಿಧಾನದಿಂದ ಕಲಿಯುವ ಕಲಿಸುವ ವಿಧಾನಕ್ಕೆ ಹೆಚ್ಚು ಒತ್ತು ಕೊಡುತ್ತಾರೆ. ಗಜಗಾತ್ರದ ಗ್ರಂಥಗಳನ್ನು ಓದುವುದಕ್ಕಿಂತ ಸಾವಿರಾರು ರೋಗಿಗಳ ಮಧ್ಯೆ ವೈದ್ಯಕೀಯ ವಿದ್ಯಾರ್ಥಿಗಳು ಕಾಲ ಕಳೆದು ರೋಗ ಶಾಸ್ತ್ರವನ್ನು ಅರಿಯಬೇಕು ಗ್ರಂಥಗಳು ಕೇವಲ ಕೆಲಕಾಲದ ರೆಫರೆನ್ಸ ಆಗಬೇಕು ಎನ್ನುತ್ತಾರೆ. ಇಂಗ್ಲೆಂಡ್ ವೈದ್ಯಕೀಯ ಕಲಿಕಾ ಕ್ಷೇತ್ರದಲ್ಲಿ ಚಾಲ್ತಿಯಲ್ಲಿರುವ ಪಿ,ಬಿ,ಎಲ್ ವಿಧಾನವನ್ನು ವೈದ್ಯಕೀಯ ಶಾಸ್ತ್ರದ ಎ,ಬಿ,ಸಿ ಲರ್ನಿಂಗ್ ಎಂದು ವಾಖ್ಯಾನಿಸುತ್ತಾರೆ.
ಪ್ರಾಬ್ಲಂ ಬೇಸ್ಡ್ ಲರ್ನಿಂಗ್ ಇಂದು ಇಂಗ್ಲೆಂಡ್ ನ ಜನಪ್ರಿಯ ಕಲಿಕಾ ವಿಧಾನವಾಗಿದೆ. ಎಂ.ಬಿ.ಬಿ.ಎಸ್ ಮೊದಲನೆ ವರ್ಷದಲ್ಲಿಯೇ ವಿದ್ಯಾರ್ಥಿಗಳು ಕಡ್ಡಾಯವಾಗಿ ಈ ಪಿ .ಬಿ.ಎಲ್ ವ್ಯವಸ್ಥೆಯ ಆಧಾರದ ಮೇಲೆಯೇ ತಮ್ಮ ಕಲಿಕೆಯನ್ನು ಪ್ರಾರಂಭಿಸಬೇಕು .ಕೇವಲ ಹತ್ತು ವಿದ್ಯಾರ್ಥಿಗಳ ಒಂದು ಗುಂಪನ್ನು ರಚಿಸಿ , ಈ ಗುಂಪಿನ ಎಲ್ಲ ಸದಸ್ಯರು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿ ವೈದ್ಯಕೀಯ ಶಾಸ್ತ್ರದ ಸಮಸ್ಯೆಗಳನ್ನು ಅರಿತುಕೊಂಡು ವೈಯಕ್ತಿಕ ಅನುಭವಗಳ ಮೂಲಕವೇ ಅಭ್ಯಾಸ ಮಾಡಬೇಕು ರೋಗಕ್ಕೆ ಪಠ್ಯ ಪುಸ್ತಕದಲ್ಲಿ ಇರುವ ವಿವರಣೆಗೆ ಗಿಂತಲೂ ತಮ್ಮ ಕೇಸ್ ಸ್ಟಡಿಯಲ್ಲಿ ಸಿಕ್ಕ ಮಾಹಿತಿಯ ಆಧಾರದ ಮೇಲೆಯೇ ವಿವರಿಸಬೇಕು . ಈ ಗುಂಪಿನಲ್ಲಿದ್ದ ವಿದ್ಯಾರ್ಥಿಗಳು ಎಲ್ಲ ಚಟುವಟಿಕೆಗಳನ್ನು ನಿರ್ವಹಿಸಬೇಕು. ಪ್ರಾಧ್ಯಾಪಕರು ಕೇವಲ ಮಾರ್ಗದರ್ಶಕರಾಗಿರುತ್ತಾರೆ. ಸ್ಕ್ರೈಬ್, ಟ್ಯೂಟರ್, ಚೇರ್ ಹಾಗೂ ಗ್ರುಪ್ ಮೆಂಬರ್ ಎಂಬ ನಾಲ್ಕು ಹಂತಗಳನ್ನು ವಿದ್ಯಾರ್ಥಿ ದಾಟಬೇಕಾಗುತ್ತದೆ.
"ಸ್ಕ್ರೈಬ್" ಆದವರು ಚರ್ಚೆಯಲ್ಲಿ ಪಾಲ್ಗೊಳ್ಳುವುದರೊಂದಿಗೆ ಗುಂಪಿನಲ್ಲಿ ಚರ್ಚಿತ ಸಂಗತಿಗಳನ್ನು ಎಲ್ಲ ಸಾಧನಗಳನ್ನು ಬಳಸಿಕೊಂಡು ಕರಾರುವಕ್ಕಾಗಿ ದಾಖಲಿಸಬೇಕು ದಾಖಲಿತ ವಿಚಾರಗಳನ್ನು ಒಪ್ಪ-ಓರಣವಾಗಿರುವಂತೆ ನೋಡಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿ ಆರಂಭದ ಹಂತದಲ್ಲಿಯೇ ರೆಕಾರ್ಡ ಕೀಪಿಂಗ್ ವಿಧಾನವನ್ನು ಸಮರ್ಥವಾಗಿ ಕಲಿಯುತ್ತಾನೆ.
'ಟ್ಯೂಟರ್' ಎರಡನೇ ಹಂತದ ಭಾಗವಹಿಸುವಿಕೆ, ಗುಂಪಿನ ಎಲ್ಲ ಸದಸ್ಯರನ್ನು ಹುರಿದುಂಬಿಸುವದರೊಂದಿಗೆ, ಚೇರ್ ಕಾರ್ಯ ನಿರ್ವಹಿಸುವವರಿಗೆ ಸಹಾಯ ಮಾಡಬೇಕು. ಸ್ಕ್ರೈಬ್ ದಾಖಲಿಸಿದ ಮಾಹಿತಿಗಳ ಗುಣಮಟ್ಟವನ್ನು ಪರೀಕ್ಷಿಸಬೇಕು. ಚರ್ಚೆಯ ವಿಧಾನ ಹಾದಿ ತಪ್ಪದಂತೆ, ವಿಷಯಾಂತರವಾಗದಂತೆ ತಡೆಹಿಡಿಯಬೇಕು. ಗುಂಪಿನಲ್ಲಿರುವ ಎಲ್ಲರೂ ಆಯ್ದ ವಿಷಯದ ಮೇಲೆ ಹಿಡಿತ ಸಾಧಿಸಿದ್ದಾರೆಯೇ? ಎಂಬುದನ್ನು ಗಮನಿಸಬೇಕು.
'ಚೇರ್' ಮಹತ್ವದ ಸ್ಥಾನವಾಗಿದೆ. ಗುಂಪಿನ ನಾಯಕತ್ವ ವಹಿಸಬೇಕು ಪ್ರತಿಯೊಬ್ಬರನ್ನು ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ಪ್ರೊತ್ಸಾಹಿಸಬೇಕು. ಗುಂಪಿನಲ್ಲಿ ಪಾಲ್ಗೊಳ್ಳುವ ಸದಸ್ಯರ ಉತ್ಸಾಹ ಕುಗ್ಗದಂತೆ ನೋಡಿಕೊಳ್ಳಬೇಕು. ಚೇರ್ ಆದವನು ಸಮಯ ಪ್ರಜ್ಞೆಯ ಮಹತ್ವ ಹೇಗೆ ರೋಗಿಯನ್ನು ರಕ್ಷಿಸುತ್ತದೆ ಎಂಬ ತಿಳುವಳಿಕೆ ನೀಡಬೇಕು. ಅಧ್ಯಯನಕ್ಕೆ ಆಯ್ದುಕೊಂಡ ರೋಗವನ್ನು ನಿರ್ವಹಿಸಲು ರೋಗಿಗಳೊಂದಿಗೆ ವೈದ್ಯ ನಡೆದುಕೊಳ್ಳುವ ಬಗೆಯನ್ನು ವಿವರಿಸಬೇಕು.
'ಗ್ರುಪ್ ಮೆಂಬರ್' ಈ ಮೂರು ಹಂತಗಳಲ್ಲಿ ಅನುಭವ ಪಡೆದು ಸದಸ್ಯನಾಗಿ ತಂಡದಲ್ಲಿ ಉಳಿಯುತ್ತಾನೆ. ಇವರು ತಂಡದ ಹಿರಿಯ ಸದಸ್ಯರಾಗಿ ಹೆಚ್ಚಿನ ಆತ್ಮ ವಿಶ್ವಾಸವನ್ನು ಗಳಿಸಿಕೊಂಡಿರುತ್ತಾರೆ. ಈ ನಾಲ್ಕು ಹಂತಗಳಲ್ಲಿ ವಿದ್ಯಾರ್ಥಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ಯಶಸ್ವಿ ವಿದ್ಯಾರ್ಥಿಯಾಗಿ ವೈದ್ಯಕೀಯ ಶಿಕ್ಷಣವನ್ನು ಮುಂದುವರೆಸುತ್ತಾನೆ. ದೊಡ್ಡ ದೊಡ್ಡ ಗ್ರಂಥಗಳಲ್ಲಿ ಉದಾಹರಿಸಿದ ಶಾಸ್ತ್ರಗಳನ್ನು ಅಭ್ಯಾಸ ಮಾಡಿದರೆ ಸಾಲದು ಎಂಬ ವಾಸ್ತವ ಅವರಲ್ಲಿ ವಿಶ್ವಾಸ ಬೆಳೆಸುತ್ತದೆ.
ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳಿಗೆ ವಿವಿಧ ಪರೀಕ್ಷೆಗಳ ಮೂಲಕ ಸವಾಲೊಡ್ಡಿ ಸೇವೆಗೆ ಅವಕಾಶ ನೀಡುವ ಎನ್.ಎಚ್.ಎಸ್. ನ ಕಠಿಣತೆ ಎದುರಿಸುವವರು ಮಾತ್ರ ಇಲ್ಲಿ ವೈದ್ಯರಾಗಿ ಉಳಿಯುತ್ತಾರೆ. ತಮ್ಮ ಹೆಸರಿನ ಮುಂದಿರುವ ಪದವಿಗಳ ಅಹಂ ಮರೆತು ಪ್ರಾಯೋಗಿಕ ಪರಿಶ್ರಮದಿಂದ ದುಡಿದರೆ ಮಾತ್ರ ಯಶಸ್ಸು ದೊರೆಯುತ್ತದೆ. ವೈದ್ಯಕೀಯ ಸೇವೆಯ ಸಂತೃಪ್ತಿಯೂ ಲಭ್ಯವಾಗುತ್ತದೆ. ಇಲ್ಲಿನ ರೋಗಿಗಳು ಅತೀ ಬುದ್ಧಿವಂತರಾಗಿರುವುದು ವೈದ್ಯರಿಗೊಂದು ಸವಾಲಾಗುತ್ತದೆ. ವೈದ್ಯಕೀಯ ವಿದ್ಯಾರ್ಥಿಗಳ ನಿರ್ಲಿಪ್ತ ಸ್ಥಿತಿ, ಸೇವಾ ಮನೋಭಾವ, ಸೌಜನ್ಯ, ಸರಳತೆ, ಕಲಿಕೆಯಲ್ಲಿರುವ ಸ್ವಾತಂತ್ರ್ಯ, ಪರೀಕ್ಷಾ ವಿಧಾನ, ಸಂವಹನಾ ಸಾಮರ್ಥ್ಯ ಹಾಗೂ ಅವರಲ್ಲಿರುವ ಆತ್ಮ ವಿಶ್ವಾಸ ಗುರು ಶಿಷ್ಯರ ಮಧ್ಯೆ ಇರುವ ಅಂತರವನ್ನು ಅಳಿಸಿ ಹಾಕಿ ಸಮಾನತೆಯನ್ನು ಸಾರುತ್ತದೆ. ಒಮ್ಮೆ ಆಸ್ಪತ್ರೆಗೆ ದಾಖಲಾದ ರೋಗಿ ನಿಶ್ಚಿಂತವಾಗಿ ಎಲ್ಲ ಚಟುವಟಿಕೆಗಳನ್ನು ಗಮನಿಸುತ್ತಾ ವೈದ್ಯರುಗಳ 'ಬಾಸ್' ಆಗಿಬಿಡುತ್ತಾನೆ. ರೋಗವನ್ನು ರೋಗಿಯನ್ನು ಸಮರ್ಪಕವಾಗಿ ತಿಳಿದುಕೊಂಡು ಕಾರ್ಯ ನಿರ್ವಹಿಸುವ ವಾತಾವರಣ ಆಸ್ಪತ್ರೆಯ ನರಕಾನುಭವವನ್ನು ದೂರವಾಗಿಸುತ್ತದೆ.

0 comments: